ನಾಪೋಕ್ಲು, ಮಾ. ೧: ಯುವಜನಾಂಗ ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಸಮಾಜ ನಿರ್ಮಾಣಕ್ಕೆ ಒಂದಾಗಬೇಕು. ಧಾರ್ಮಿಕ ಕೇಂದ್ರಗಳು ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜ ಕಟ್ಟುವ ಸಲುವಾಗಿ ಕಾರ್ಯೋನ್ಮುಖ ವಾಗಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲನಾ ಸಾಫಿ ಸಅದಿ ಕರೆ ನೀಡಿದರು. ಇತಿಹಾಸದ ಪ್ರಸಿದ್ಧ ಎಮ್ಮೆಮಾಡು ವಾರ್ಷಿಕ ಉರೂಸ್ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆ ಗಾಂಜಾ ಸೇರಿದಂತೆ ಮಾದಕ ದ್ರವ್ಯ ಸೇವನೆಗೆ ದಾಸರಾಗುತ್ತಿರುವುದು ವಿಷಾಧನೀಯ. ಇದು ಸಮುದಾಯಕ್ಕೆ ಕೂಡ ಕಳಂಕ ತರುವ ವಿಚಾರವಾಗಿದೆ. ಡ್ರಗ್ಸ್ ದಾಸರಾಗಿರುವವರು ಕೊಲೆ, ದರೋಡೆ, ಸುಲಿಗೆ, ಮತ್ತಿತರ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕು. ಇದನ್ನು ಸಮುದಾಯದ ಮುಖಂಡರು ಸವಾಲಾಗಿ ಸ್ವೀಕರಿಸಬೇಕು. ಎಲ್ಲಾ ದರ್ಗಾಗಳ ಆಡಳಿತ ಮಂಡಳಿ ಮತ್ತು ಸಮಿತಿಯವರು ಯುವ ಜನತೆಯನ್ನು ತಿದ್ದುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು. ಶೇ. ೩ ರಷ್ಟು ಜನ ಮಾತ್ರ ಪದವಿ ಪಡೆದವರಾಗಿದ್ದಾರೆ.