ಮಡಿಕೇರಿ, ಫೆ. ೨೮: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ವಾಲ್ನೂರು ಶಾಖೆಯ ಸಭಾಂಗಣದಲ್ಲಿ ಕೋವಿಡ್-೧೯ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ವಹಿಸಿದ್ದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಅತಿಥಿಗಳಾಗಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ನಂಜರಾಯಪಟ್ಟಣ ಆಡಳಿತ ವೈದ್ಯಾಧಿಕಾರಿ ಪ್ರತಾಪ್ ಸಾಗರ್ ಪಾಲ್ಗೊಂಡಿದ್ದರು.

ಸಮಾರAಭದಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ವೈದ್ಯಾದಿಕಾರಿ ಡಾ. ಪ್ರತಾಪ್ ಸಾಗರ್ ಮತ್ತು ಸಂಘದ ವ್ಯಾಪ್ತಿಯ ನರ್ಸ್ಗಳು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕ್ರೀಡಾ ರತ್ನ ಹಾಗೂ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ, ಸಂಘದ ಉಪಾಧ್ಯಕ್ಷ ಧನಪಾಲ ಅವರ ಪುತ್ರಿ ಬಿ.ಡಿ. ಲಾವಣ್ಯ ಅವರನ್ನು ಸನ್ಮಾನಿಸಲಾಯಿತು.

ಅಪ್ಪಚ್ಚು ರಂಜನ್ ಅವರು ಸನ್ಮಾನಿಸಿ ಮಾತನಾಡಿ, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ದುಡಿದವರನ್ನು ಅಭಿನಂದಿಸಿ, ಗಡಿಯಲ್ಲಿ ದೇಶ ಕಾಯುವ ಸೈನ್ಯದವರಂತೆ ದೇಶದೊಳಗೆ ವೈರಸ್ ವಿರುದ್ಧ ಕಾರ್ಯಕರ್ತರು ಮನೆಮಂದಿಯವರನ್ನು ತೊರೆದು ಕೆಲಸ ನಿರ್ವಹಿಸಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಧನಪಾಲ್, ಡಿಸಿಸಿ ಬ್ಯಾಂಕ್ ಹಿರಿಯ ವೃತ್ತ ಮೇಲ್ವಿಚಾರಕ ಅಜಿತ್ ಹಾಗೂ ಸಂಘದ ನಿರ್ದೇಶಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಂಘದ ನಿರ್ದೇಶಕ ಮನು ಮಹೇಶ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೆ.ಟಿ. ಧನಂಜಯ ನಿರೂಪಿಸಿ, ವಂದಿಸಿದರು.