ಮಡಿಕೇರಿ, ಫೆ. ೨೮: ನಗರದ ಇಂದಿರಾ ಕ್ಯಾಂಟೀನ್ ಬಳಿಯ ಚರಂಡಿಗೆ ಬಿದ್ದು ಅಪಾಯದಲ್ಲಿ ಸಿಲುಕಿದ್ದ ಹಸುವನ್ನು ಸಾರ್ವಜನಿಕರು ತಾ. ೨೮ರ ಬೆಳಿಗ್ಗೆ ರಕ್ಷಣೆ ಮಾಡುವ ಮೂಲಕ ಮಾನವೀಯತೆ ತೋರಿದರು. ಕಳೆದ ಕೆಲವು ದಿನಗಳ ಹಿಂದೆ ಹೊಸದಾಗಿ ಚರಂಡಿ ನಿರ್ಮಿಸಲಾಗಿತ್ತು.

ಆದರೆ, ಅದರ ಮೇಲೆ ಸ್ಲ್ಯಾಬ್ ನಿರ್ಮಿಸದೇ ಬಿಟ್ಟಿದ್ದರ ಪರಿಣಾಮವಾಗಿ ಮೇಯಲು ಬಂದಿದ್ದ ಹಸು ಚರಂಡಿಗೆ ಬಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಬೆಳ್ಳಂಬೆಳಿಗ್ಗೆಯೇ ಅದನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕರು ಹಾಗೂ ಪತ್ರಕರ್ತರು ಸುಮಾರು ಅರ್ಧ ಗಂಟೆ ಸಾಹಸ ಮಾಡಿ ಹಸುವನ್ನು ಮೇಲೆತ್ತಿದ್ದರು. ಚಾಲಕರು ವಾಹನದಲ್ಲಿದ್ದ ಹಗ್ಗವನ್ನು ತಂದು ನೆರವಾದರು. ರಸ್ತೆಯಲ್ಲಿ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದವರೂ ಕೈಜೋಡಿಸಿ, ಮಾನಿವಿಸÃಯತೆ ತೋರಿದರು.

ರಾಷ್ಟçಪತಿ ಬರುವ ಸಮಯದಲ್ಲಿ ಎಲ್ಲ ಅಧಿಕಾರಿಗಳು ಇಲ್ಲಿ ನಿಂತು ತರಾತುರಿಯಲ್ಲಿ ಕೆಲಸ ಮಾಡಿದ್ದರು. ಚರಂಡಿಯ ಮೇಲ್ಭಾಗ ಮುಚ್ಚದಿದ್ದರೆ ರಾತ್ರಿ ಸಮಯದಲ್ಲಿ ಮನುಷ್ಯರು ಕೂಡ ಈ ಚರಂಡಿಯಲ್ಲಿ ಬೀಳುತ್ತಾರೆ. ಅದಕ್ಕಿಂತ ಮುಂಚೆ ಚರಂಡಿಯ ಮೇಲ್ಭಾಗವನ್ನು ಮುಚ್ಚಲು ಕ್ರಮಗೊಳ್ಳಬೇಕು. ರಾಷ್ಟçಪತಿ ಬಂದು ಹೋದ ನಂತರ ಯಾರೂ ಈ ಕಡೆ ತಿರುಗಿ ನೋಡಲಿಲ್ಲ ಎಂದು ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದಿದ್ದರೆ, ಈ ರೀತಿಯ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿಯ ಮೇಲ್ಭಾಗ ತಕ್ಷಣವೇ ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.