ವೀರಾಜಪೇಟೆ, ಫೆ. ೨೪: ಕೋವಿಡ್ ನಿಯಂತ್ರಣದ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಕೇರಳ ರಾಜ್ಯದ ಕೂಟುಹೊಳೆಯ ಸ್ಥಳೀಯರು ಕರ್ನಾಟಕದಿಂದ ಬರುವ ವಾಹನವನ್ನು ಕೂಟುಹೊಳೆ ಸೇತುವೆ ಬಳಿ ತಡೆದು ಪ್ರತಿಭಟನೆ ನಡೆಸಿದರು. ಸೇತುವೆ ಸಂಚಾರ ತಡೆದ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಂಚಾರಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಟ್ರಾಫಿಕ್ ಜಾಮ್ ಸೃಷ್ಟಿಯಾಯಿತು. ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ವರದಿಯನ್ನು ಕಡ್ಡಾಯ ಗೊಳಿಸಿರುವುದನ್ನು ಪ್ರತಿಭಟನಾ ನಿರತರು ಆಕ್ಷೇಪಿಸಿದರು. ಕರ್ನಾಟಕ ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪದ ಹೊರತಾಗಿಯೂ, ಕರ್ನಾಟಕದ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕೇರಳದಲ್ಲಿ ಕೋವಿಡ್ ಹರಡುವಿಕೆ ವಿಪರೀತ ವಾಗಿರುವ ಹಿನ್ನೆಲೆ ಕರ್ನಾಟಕ ಸರಕಾರ ಕೈಗೊಂಡ ನಿರ್ಧಾರ ಹಿಂತೆಗೆದುಕೊಳ್ಳಬೇಕೆAದು ಒತ್ತಾಯಿಸಿ ದರು. ಜೊತೆಗೆ ನಿಯಮಗಳನ್ನು ಸಡಿಲ ಮಾಡಬೇಕೆಂದು ಆಗ್ರಹಿಸಿದರು. ಎರಡು ಗಂಟೆಗಳ ಪ್ರತಿಭಟನೆಯ ನಂತರ, ಇರಿಟಿ ಡಿ.ವೈ.ಎಸ್ಪಿ ಪ್ರಿನ್ಸ್ ಅಬ್ರಹಾಂ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿ ಸಂಚಾರವನ್ನು ಪುನರ್ ಆರಂಭಿಸಿದರು.
ವರದಿ: ಕೆ.ಕೆ.ಎಸ್.