ಕುಶಾಲನಗರ, ಫೆ. ೨೪: ಕೊಪ್ಪ ಕಾವೇರಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಯೋರ್ವಳನ್ನು ರಕ್ಷಣೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ೩ ದಿನಗಳ ಹಿಂದೆ ಜೋರು ಮಳೆ ಬರುತ್ತಿದ್ದ ಸಂದರ್ಭ ಮೈಸೂರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಾಲಕಿಯನ್ನು ಕೊಪ್ಪ ಗೇಟ್‌ನಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸರು ಗಮನಿಸುತ್ತಿದ್ದಂತೆಯೇ ಆಕೆ ಸೇತುವೆ ಮೇಲಿನಿಂದ ನದಿಗೆ ಹಾರಿದ್ದಾಳೆ. ವಿದ್ಯುತ್ ಇಲ್ಲದ ರಾತ್ರಿಯಲ್ಲಿ ಕೂಡಲೇ ಟಾರ್ಚ್ ಬೆಳಕಿನಲ್ಲಿ ಪೊಲೀಸ್ ಸಿಬ್ಬಂದಿ ಅರುಣ್ ಕುಮಾರ್ ಮತ್ತು ಉಮೇಶ್ ನದಿಗೆ ಇಳಿದು ಹುಡುಕುವ ಸಂದರ್ಭದಲ್ಲಿ ಬಾಲಕಿ ಕಣ್ಣಿಗೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿರುವ ಪೊಲೀಸ್ ಸಿಬ್ಬಂದಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯ ಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಈಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.