*ಗೋಣಿಕೊಪ್ಪ, ಫೆ. ೨೪: ಹಾಡಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ತೊಡಕು ಉಂಟುಮಾಡುತ್ತಿರುವ ಬಗ್ಗೆ ಸ್ಥಳೀಯ ಶಾಸಕರು ಉಸ್ತುವಾರಿ ಸಚಿವರು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಅತಿಶೀಘ್ರದಲ್ಲಿ ಕ್ರಮಕೈಗೊಳ್ಳ ಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ ತಿಳಿಸಿದರು.

ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ತಟ್ಟೆಕೆರೆ ಹಾಡಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದ ಅವರು ಬುಡಕಟ್ಟು ಸಮುದಾಯದವರು ನಿರಂತರವಾಗಿ ಶೋಷಿತರಾಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯ ಒದಗಿಸಿ ಕೊಡಲು ಅರಣ್ಯ ಇಲಾಖೆ ಅರಣ್ಯದ ನಿಬಂಧನೆಗಳನ್ನು ಹೇಳಿ ಇವರ ಬದುಕನ್ನು ಕಡೆಗಣಿಸುತ್ತಿದೆ. ಈ ಬಗ್ಗೆ ಮೇಲಿನ ವ್ಯವಸ್ಥೆಗೆ ಮಾಹಿತಿ ನೀಡಿ ಮೂಲಭೂತ ಸೌಕರ್ಯ ಒದಗಿಸಿ ಕೊಡುವ ವ್ಯವಸ್ಥೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲೆಯ ಬಹುತೇಕ ಹಾಡಿಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರು ವ್ಯವಸ್ಥೆಯ ಬಗ್ಗೆ ಮರುಗಿದರು.

ಈ ಸಂದರ್ಭ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೆರೆ ಸೂರ್ಯ ಅಯ್ಯಪ್ಪ, ತಾಲೂಕು ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಹಾಜರಿದ್ದರು.