ಸೋಮವಾರಪೇಟೆ, ಫೆ. ೨೪: ಕಳಪೆ ಕಾಮಗಾರಿಯಿಂದಾಗಿ ಕಿತ್ತುಬಂದಿದ್ದ ತಾಲೂಕಿನ ಕುಂದಳ್ಳಿ, ಕುಮಾರಳ್ಳಿ, ಬೀದಳ್ಳಿ ಮಾರ್ಗದ ೨೦೦ ಮೀಟರ್ ರಸ್ತೆಯನ್ನು ಕಿತ್ತು ಮರು ಡಾಂಬರೀಕರಣ ಮಾಡ ಲಾಯಿತು. ರೂ. ೮ ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಗ್ರಾಮಸ್ಥರು ಕಳೆದ ಮಂಗಳವಾರ ದಂದು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ, ಮರು ಡಾಂಬರೀ ಕರಣಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಸುಮಾರು ೨೦೦ ಮೀಟರ್ ರಸ್ತೆಯನ್ನು ಮರುಡಾಂಬರೀಕರಣ ನಡೆಸಲಾಯಿತು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಭೇಟಿ ನೀಡಿ, ಮರುಡಾಂಬರೀಕರಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಖಾಸಗಿ ರೆಸಾರ್ಟ್ ಸಮೀಪ ೨೦೦ಮೀಟರ್ ಹಾಗೂ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿರುವ ಸ್ಥಳದಲ್ಲಿ ಮರು ಡಾಂಬರೀಕರಣ ಮಾಡಲಾಯಿತು.

ಇಲಾಖೆಯ ಗುಣಮಟ್ಟ ತಪಾಸಣೆ ಅಧಿಕಾರಿ ನಾಗರಾಜು, ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಹಾಗೂ ಇಂಜಿನಿಯರ್ ರಮಣೇಗೌಡ ಕಾಮಗಾರಿ ನಡೆಯುವ ಸಂದರ್ಭ ಸ್ಥಳದಲ್ಲಿದ್ದರು.