ಕುಶಾಲನಗರ, ಫೆ. ೨೩: ಕುಶಾಲನಗರ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಪಟ್ಟಣದ ೩ನೇ ಬ್ಲಾಕ್ ಆದರ್ಶ ದ್ರಾವಿಡ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್ ಎಂಬವರಿಗೆ ಸೇರಿದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಾತ್ರಿ ವೇಳೆ ಮನೆಯ ಹಿಂಬಾಗಿಲನ್ನು ಒಡೆದು ಕಳ್ಳರು ಸುಮಾರು ೮೦ ಸಾವಿರ ನಗದು, ಒಂದು ಲ್ಯಾಪ್‌ಟಾಪ್, ೨೦ ಗ್ರಾಂ ಒಡವೆಗಳನ್ನು ಕದ್ದಿರುವುದಾಗಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಗೆ ಹಿಂದಿರುಗಿ ಬಂದ ಸಂದರ್ಭ ಹಿಂದಿನ ಬಾಗಿಲು ಒಡೆದಿರುವುದನ್ನು ಕಂಡು ಪರಿಶೀಲಿಸಿದ ಸಂದರ್ಭ ಮನೆ ಕಳ್ಳತನವಾಗಿರುವುದು ಮನೆ ಮಾಲೀಕ ಲೋಕೇಶ್ ಅವರ ಗಮನಕ್ಕೆ ಬಂದಿದೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಠಾಣಾಧಿಕಾರಿ ಗಣೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.