ಸಿದ್ದಾಪುರ, ಫೆ. ೨೨: ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಮತ್ತೆ ಕಾಡಾನೆ ದಾಂಧಲೆ ಮುಂದು ವರೆಸಿದ್ದು, ಹಾಡಿಯ ನಿವಾಸಿಯೊಬ್ಬರ ಮನೆಯೊಳಗೆ ಕಾಡಾನೆ ನುಗ್ಗಿ ಮನೆಯ ಬಾಗಿಲನ್ನು ತುಳಿದು ಹಾನಿಗೊಳಿಸಿರುತ್ತದೆ.

ಕಳೆದ ೪ ದಿನಗಳಿಂದ ಚೆನ್ನಯ್ಯನಕೋಟೆ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆಯ ಮೇಲೆ ದಾಳಿ ನಡೆಸಿ ಹಾನಿಗೊಳಿಸುತ್ತಿದೆ. ಅಲ್ಲದೇ ಮನೆಯ ಒಳಗಿರುವ ಅಕ್ಕಿ, ತರಕಾರಿಗಳನ್ನು ಎಳೆದು ತಿನ್ನುತ್ತಿದೆ. ಇದೀಗ ತಾ. ೨೧ರ ಮಧ್ಯರಾತ್ರಿ ಒಂಟಿಸಲಗವೊAದು ಬಸವನಹಳ್ಳಿ ಹಾಡಿಯ ಬೋಜ ಎಂಬವರ ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿದೆ.

ಕಾಡಾನೆ ದಾಳಿ ನಡೆಸುವ ಸಂದರ್ಭದಲ್ಲಿ ಅದೃಷ್ಟವಶಾತ್ ಕುಟುಂಬದವರು ಕಾರ್ಯನಿಮಿತ್ತ ಹೊರ ಊರಿಗೆ ಹೋಗಿದ್ದರು ಎನ್ನಲಾಗಿದೆ. ಕಳೆದ ೪ ದಿನಗಳಿಂದ ಕಾಡಾನೆಗಳು ಹಾಡಿಯ ನಿವಾಸಿಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಾ ಮನೆಗಳಿಗೆ ಹಾನಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ, ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಾಡಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಅರಣ್ಯ ಇಲಾಖೆ ಹಾಗೂ ಐಟಿಡಿಪಿ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ.