ಶ್ರೀಮಂಗಲ, ಫೆ. ೨೨: ದ. ಕೊಡಗಿನಲ್ಲಿ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ಇದೀಗ ಎರಡು ದಿನಗಳ ಹಿಂದೆಯಷ್ಟೇ ಎರಡು ಜನರನ್ನು ಬಲಿ ಪಡೆದಿರುವ ಹುಲಿ ಇದೀಗ ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ತಾವಳಗೇರಿ ಗ್ರಾಮದಲ್ಲಿ ಕೊಟ್ಟಿಗೆಗೆ ನುಗ್ಗಿ ಜಾನುವಾರುವನ್ನು ಕೊಂದು ಹಾಕಿದೆ.ಇದರಿಂದಾಗಿ ನರಭಕ್ಷಕ ಹುಲಿ ಸೆರೆಯಾಗಿಲ್ಲ. ಈ ಪ್ರದೇಶದಲ್ಲಿಯೇ ಓಡಾಡುತ್ತಿದೆ ಎಂದು ಸ್ಥಳೀಯರು ಭಯಗೊಂಡಿದ್ದು, ತಕ್ಷಣ ಈ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.ಎರಡು ಜನರನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯಬೇಕು

(ಮೊದಲ ಪುಟದಿಂದ) ಮತ್ತು ಗುಂಡಿಟ್ಟು ಕೊಲ್ಲಬೇಕೆಂದು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಯ ಪ್ರಮುಖರು ಪ್ರತಿಭಟನೆ ನಡೆಸಿದ ಹಿನ್ನೆಲೆ ಅರಣ್ಯ ಇಲಾಖೆಯಿಂದ ಭಾನುವಾರ ಮಧ್ಯಾಹ್ನದ ನಂತರ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿತ್ತು. ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಮಂಚಳ್ಳಿಗ್ರಾಮದಲ್ಲಿ ಹುಲಿಯೊಂದು ಅರವಳಿಕೆ ಹಾರಿಸಿ ಸೆರೆ ಹಿಡಿಯ ಲಾಗಿತ್ತು. ಈ ಹುಲಿ ಸೆರೆಯಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದರು.ಆದರೆ, ತಾ. ೨೧ ರ (ಭಾನುವಾರ) ಬೆಳಿಗ್ಗೆ ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ ಅವರ ಮೇಲೆ ಎರಗಿ ಬಲಿ ಪಡೆದಿದ್ದ ಸ್ಥಳದಿಂದ ಕೇವಲ ಅಂದಾಜು ೧ ಕಿ.ಮೀ ಅಂತರದಲ್ಲಿ ಭಾನುವಾರ ರಾತ್ರಿ ತಾವಳಗೇರಿ ಗ್ರಾಮದ ದೇಕಮಾಡ ಪುಷ್ಪ ಅವರ ಮಿಶ್ರತಳಿಯ ಹಸುವನ್ನು ಕೊಟ್ಟಿಗೆಗೆ ನುಗ್ಗಿ ಕೊಂದಿದ್ದು, ಎತ್ತರದ ಗೇಟ್ ಇದ್ದ ಪರಿಣಾಮ ಅದನ್ನು ಎಳೆದೊಯ್ಯಲು ಸಾಧ್ಯವಾಗದೆ ತೆರಳಿದೆ. ಕೊಟ್ಟಿಗೆಯಲ್ಲಿ ಇನ್ನು ಎರಡು ಹಸುಗಳಿದ್ದು ಅವುಗಳ ಮೇಲೆ ಹುಲಿ ದಾಳಿ ಮಾಡಿಲ್ಲ. ಬೆಳಿಗ್ಗೆ ಹಾಲು ಕರೆಯಲು ಮನೆಯವರು ಬಂದಾಗ ಹುಲಿ ದಾಳಿ ಮಾಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಕಾರ್ಯಾಚರಣೆಯಲ್ಲಿರುವ ಹುಲಿ ಸೆರೆ ತಂಡದ ಅಭಿಮನ್ಯು, ಕೃಷ್ಣ ಎಂಬ ಎರಡು ಸಾಕಾನೆಯೊಂದಿಗೆ ಆಗಮಿಸಿ ಹುಡುಕಾಟ ಕೈಗೊಂಡಿದ್ದಾರೆ. ಇದರೊಂದಿಗೆ ಕೊಟ್ಟಿಗೆಯ ಸಮೀಪವೇ ಹುಲಿ ಸೆರೆಗೆ ಅರಣ್ಯ ಇಲಾಖೆಯ ತಂಡ ಬೋನ್ ಇರಿಸಿದೆ. ಸೋಮವಾರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಟಿ.ಶೆಟ್ಟಿಗೇರಿ ಗ್ರಾಮದ ಚೆಟ್ರಂಡ ಪೂಣಚ್ಚ ಅವರ ತೋಟಕ್ಕೆ ಹುಲಿ ರಸ್ತೆಯಿಂದ ನುಗ್ಗಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದು ಹುಲಿ ಕಾರ್ಯಾಚರಣೆ ತಂಡ ಅಲ್ಲಿಗೆ ತೆರಳಿದೆ.