ಟಿ.ಶೆಟ್ಟಿಗೇರಿ/ಮಂಚಳ್ಳಿ.ಫೆ.೨೧: ನಿನ್ನೆ ತಾನೆ ಕುಮಟೂರಿನಲ್ಲಿ ಅಮಾಯಕ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದಿದ್ದ ನರಭಕ್ಷಕ ಹುಲಿ ಇಂದು ಮತ್ತೆ ಟಿ.ಶೆಟ್ಟಿಗೇರಿಯಲ್ಲಿ ಕಾರ್ಮಿಕ ವೃದ್ಧ ಮಹಿಳೆಯೋರ್ವರನ್ನು ಬಲಿ ತೆಗೆದುಕೊಂಡು ಮಾಂಸ ಭಕ್ಷಿಸಿ ಮರೆಯಾಗಿತ್ತು.

ಗ್ರಾಮಸ್ಥರ, ಸಂಘಟನೆಗಳ ಒತ್ತಡಕ್ಕೆ ಮಣಿದು ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಮತ್ತು ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹುಲಿಯನ್ನು ಮಂಚಳ್ಳಿಯ ಮಚ್ಚಮಾಡ ರತನ್ ಎಂಬವರ ತೋಟದಲ್ಲಿದ್ದುದನ್ನು ಪತ್ತೆ ಮಾಡಿ ಸೆರೆಹಿಡಿದಿದ್ದಾರೆ. ಈ ಹೆಣ್ಣು ಹುಲಿಯ ಮುಂಗಾಲಿನಲ್ಲಿ ತೀವ್ರ ರೀತಿಯ ಗಾಯ ಕಂಡು ಬಂದಿದೆ. ಸುಮಾರು ೮-೯ ವಯೋಮಿತಿಯ ಈ ಹುಲಿಯನ್ನು ಸೆರೆಹಿಡಿಯಲು ಅಭಿಮನ್ಯು ಮತ್ತು ಗೋಪಾಲ ಆನೆಗಳ ಸಹಾಯ ಪಡೆಯಲಾಯಿತು ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಸಂಜೆ ಸುಮಾರು ೫.೧೫ರ ವೇಳೆ ವೈದ್ಯರುಗಳಾದ ಡಾ.ಮುಜೀಬ್ ಹಾಗೂ ಅಕ್ರಂ ಇವರುಗಳ ಸಕಾಲಿಕ ನೇರ ಗುರಿಯ ಅರವಳಿಕೆ ಮದ್ದು ಪ್ರಯೋಗ ಯಶಸ್ವಿಯಾಗಿದ್ದು, ಹುಲಿಯು ಪ್ರಜ್ಞೆ ತಪ್ಪಿ ಬಿದ್ದಾಗ ಅರಣ್ಯ ಸಿಬ್ಬಂದಿ ಬಲೆ ಬೀಸಿ ಹಿಡಿದು ಬೋನಿನೊಳಕ್ಕೆ ತಳ್ಳಿ ಬೀಗ ಜಡಿಯುವಲ್ಲಿ ಸಫಲರಾದರು.

ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೆರೆಯಾದ ಹುಲಿಯನ್ನು ಮೈಸೂರು ಸಮೀಪದ ಇಲವಾಲದ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.

ಕಾರ್ಯಾಚರಣೆಗೆ ೩ ತಂಡ ರಚನೆ ಇದಕ್ಕೂ ಮುನ್ನ ಕಾರ್ಯಾಚರಣೆಗೆ ಸುಮಾರು ೧೦೦ ಜನರು ಇರುವ ಕಾರ್ಯಾಚರಣೆ ತಂಡವನ್ನು ಮೂರು ವಿಭಾಗವಾಗಿ ಮಾಡಿ ಕುಮಟೂರು, ಟಿ.ಶೆಟ್ಟಿಗೇರಿ, ಶ್ರೀಮಂಗಲ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಲು ನಿರ್ದೇಶನ ನೀಡಲಾಗಿತ್ತು. ಕಾರ್ಯಾಚರಣೆ ತಂಡದಲ್ಲಿ ಶಾರ್ಪ್ ಶೂಟರ್‌ಗಳು, ಮಾಹಿತಿಗಾರರು, ನೇವಿಗೇಟರ್‌ಗಳು, ಕ್ಯಾಮರಾ ಮ್ಯಾನ್‌ಗಳು ಇದ್ದರು.

ಕಾರ್ಯಾಚರಣೆಯಲ್ಲಿ ಎಪಿಸಿಸಿಎಫ್ ಬಿ.ಪಿ.ರವಿ, ಸಿಸಿಎಫ್ ಹೀರಾಲಾಲ್, ನಾಗರಹೊಳೆ ಫೀಲ್ಡ್ ಡೈರೆಕ್ಟರ್ ಮಹೇಶ್‌ಕುಮಾರ್, ಮಡಿಕೇರಿ ಡಿಎಫ್‌ಓ ಪ್ರಭಾಕರನ್, ಮಡಿಕೇರಿ ವನ್ಯಜೀವಿ ಡಿಎಫ್‌ಓ ಶಿವರಾಮ್ ಬಾಬು, ವೀರಾಜಪೇಟೆ ಡಿಎಫ್‌ಓ ಚಕ್ರಪಾಣಿ, ಮೈಸೂರು ಡಿಎಫ್‌ಓ ಪ್ರಶಾಂತ್, ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ, ಮೈಸೂರು ಸ್ಕಾ÷್ವಡ್ ಡಿಎಫ್‌ಓ ಎ.ಟಿ.ಪೂವಯ್ಯ, ವೀರಾಜಪೇಟೆ ಎಸಿಎಫ್ ರೋಶಿನಿ, ನಾಗರಹೊಳೆ ಎಸಿಎಫ್ ಗೋಪಾಲ್, ಹುಣಸೂರು ಎಸಿಎಫ್ ಸತೀಶ್, ಶ್ರೀಮಂಗಲ ಆರ್‌ಎಫ್‌ಓ ವೀರೇಂದ್ರ ಮರಿಬಸವಣ್ಣವರ್, ಪೊನ್ನಂಪೇಟೆ ಆರ್‌ಎಫ್‌ಓ ರಾಜಪ್ಪ, ವೀರಾಜಪೇಟೆ ಆರ್‌ಎಫ್‌ಓ ದೇವಯ್ಯ, ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್, ಮೈಸೂರು ಮೃಗಾಲಯದ ಡಾ.ಮದನ್, ಶಾರ್ಪ್ ಶೂಟರ್‌ಗಳಾದ ಕಣ್ಣಂಡ ರಂಜನ್, ಅಕ್ರಮ್, ಅಮಿತ್, ಗಿರೀಶ್, ಕೊಡಗು ವನ್ಯಜೀವಿ ಸಂಘದ ಉಪಾಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ ಹಾಗೂ ಸಿಬ್ಬಂದಿಗಳ ತಂಡ ಪಾಲ್ಗೊಂಡಿತ್ತು.

ವೃದ್ಧ ಮಹಿಳೆ ಬಲಿ

ಶನಿವಾರ ಸಂಜೆ ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ

(ಮೊದಲ ಪುಟದಿಂದ) ಕಾರ್ಮಿಕ ಬಸವರವರ ಪುತ್ರ ೧೬ ವರ್ಷದ ೮ನೇ ತರಗತಿ ವಿದ್ಯಾರ್ಥಿ ಅಯ್ಯಪ್ಪನನ್ನು ಹುಲಿ ದಾಳಿ ನಡೆಸಿ ಕೊಂದ ಬೆನ್ನಲ್ಲೇ ೧೪ ಗಂಟೆ ಅವಧಿಯಲ್ಲಿ ಅಂದಾಜು ೫ ಕಿ.ಮೀ ನೇರ ಅಂತರದ ಟಿ.ಶೆಟ್ಟಿಗೇರಿ ಗ್ರಾಮದ ಆಲೇಮಾಡ ಸೋಮಣ್ಣ ಮತ್ತು ಬೋಪಣ್ಣ ಸಹೋದರರ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಬೊಳಕ ಅವರ ಪತ್ನಿ ೬೫ ವರ್ಷದ ಚಿಣ್ಣಿ ಎಂಬಾಕೆಯನ್ನು ತಾ.೨೧ ರ ಮುಂಜಾನೆ ೭ ಗಂಟೆ ಸುಮಾರಿಗೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.

ತಾ.೨೧ ರ ಮುಂಜಾನೆ ೭ ಗಂಟೆಗೆ ಟಿ.ಶೆಟ್ಟಿಗೇರಿಯಲ್ಲಿ ಮಹಿಳೆ ಮೇಲೆ ಹುಲಿ ದಾಳಿ ನಡೆದ ಪ್ರಕರಣದಲ್ಲಿ ಪಣಿಯರವರ ಚಿಣ್ಣಿ ರಸ್ತೆಯ ಸಮೀಪ ಅಣಬೆ ಕೀಳುತ್ತಿದ್ದ ಸಂದರ್ಭ ಹುಲಿ ದಾಳಿ ಮಾಡಿದ್ದು, ಹುಲಿ ದಾಳಿ ಮಾಡಿದ ಸ್ಥಳ ಲೈನ್ ಮನೆಯಿಂದ ಕೇವಲ ೨೫ ಮೀಟರ್ ಅಂತರವಷ್ಟೇ ಇದೆ. ಹುಲಿಯು ತಲೆಯ ಹಿಂಬಾಗಕ್ಕೆ ಪಂಜೆಯಲ್ಲಿ ಹೊಡೆದು ಕಚ್ಚಿಕೊಂಡು ಕಾಫಿ ತೋಟದೊಳಗೆ ಎಳೆದೊಯ್ದಿರು ವುದನ್ನು ಅಲ್ಲೇ ಇದ್ದ ಚಿಣ್ಣಿಯವರ ಲೈನ್ ಮನೆಯಲ್ಲಿದ್ದ ಇತರ ಕಾರ್ಮಿಕರು ಸ್ಪಷ್ಟವಾಗಿ ಕಾಣದೆ ಹುಲಿಯು ನಾಯಿಯನ್ನು ಹೊತ್ತೊಯ್ದಿದೆ ಎಂದು ಆತಂಕದಿAದ ಬೊಬ್ಬೆ ಹಾಕಿದ್ದರು. ಆದರೆ, ದೂರದಿಂದಲೇ ಇದನ್ನು ಗಮನಿಸಿದಾಗ ಚಿಣ್ಣಿಯವರ ಪುತ್ರ ಅಪ್ಪುವಿಗೆ ತಾಯಿಯನ್ನು ಕೆಳಗೆ ಹಾಕಿಕೊಂಡು ಹುಲಿ ತಲೆಯನ್ನು ಕಚ್ಚಿದ ಜಾಗದಲ್ಲಿ ರಕ್ತ ಹೀರುತ್ತಿದ್ದುದನ್ನು ಕಂಡು ಆತಂಕಗೊAಡು ಬೊಬ್ಬೆ ಹಾಕಿದ್ದಾರೆ. ಇದರಿಂದ ಹುಲಿ ಸುಮಾರು ೫೦ ಮೀಟರ್‌ನಷ್ಟು ದೂರ ಮಹಿಳೆಯನ್ನು ಎಳೆದೊಯ್ದ ಜಾಗದಿಂದ ಬಿಟ್ಟು ಓಡಿದೆ. ಮೃತ ಚಿಣ್ಣಿ ಪತಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಎರಡು ಪ್ರಕರಣದಲ್ಲಿಯೂ ಹುಲಿ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಸ್ಥಳದಲ್ಲಿ ತಲೆಯಿಂದ ಮೆದುಳು ಹೊರ ಬಂದು ಚೆÀಲ್ಲಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ.

ಈ ಎರಡು ಪ್ರಕರಣದಿಂದ ರೊಚ್ಚಿಗೆದ್ದ ದಕ್ಷಿಣ ಕೊಡಗಿನ ಜನರು ಹುಲಿ ದಾಳಿ ಮಾಡಿದ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ನಿರ್ಲಕ್ಷö್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಲು ಅನುಮತಿಯೊಂದಿಗೆ ಕಾರ್ಯಾಚರಣೆ ನಡೆಸಬೇಕೆಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಿಗ್ಬಂಧನ ಹಾಕಿದರು.

ಈ ವೇಳೆ ಎಪಿಸಿಸಿಎಫ್ ಬಿ.ಪಿ.ರವಿ, ಸಿಸಿಎಫ್ ಹಿರಾಲಾಲ್ ರವರು ತಕ್ಷಣದಿಂದಲೇ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಹುಲಿ ದಾಳಿಗೆ ಬಲಿಯಾದ ಎರಡು ಪ್ರÀಕರಣದ ಅಂತ್ಯಕ್ರಿಯೆಗೆ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ನೀಡುವ ಹಣವನ್ನು ವೀಣಾ ಅಚ್ಚಯ್ಯ ಅವರ ಮೂಲಕ ತಲಾ ರೂ. ೨೦ ಸಾವಿರಗಳನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಿದರು.

ಅಲ್ಲದೆ ಎರಡು ಕುಟುಂಬಗಳಿಗೆ ತಲಾ ರೂ. ೨ ಲಕ್ಷದ ಚೆಕ್ ನೀಡಲಾಗಿದ್ದು, ಉಳಿದ ರೂ.೫.೫೦ ಲಕ್ಷ ಹಣವನ್ನು ಮರಣೋತ್ತರ ಪರೀಕ್ಷೆ ವರದಿಯ ನಂತರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಸಂತ್ರಸ್ತ ಕುಟುಂಬಕ್ಕೆ ನಿಯಾಮಾನುಸಾರ ರೂ. ೫ ಸಾವಿರ ಮಾಸಿಕ ಪಿಂಚಣಿ ನೀಡಲು ಅರಣ್ಯಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.

ಜನಾಕ್ರೋಶ

ಇದಕ್ಕೂ ಮುನ್ನ ಪರಿಸ್ಥಿತಿ ಕೈಮೀರಿದ್ದು ಹುಲಿ ಸೆರೆಗೆ ಪ್ರಯತ್ನಿಸದೆ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಲು ಅನುಮತಿಯೊಂದಿಗೆ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಅದುವರೆಗೆ ನಿಮ್ಮನ್ನು ಸ್ಥಳದಿಂದ ಕದಲಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಜೀವಗಳನ್ನು ಬಲಿ ತೆಗೆದುಕೊಂಡ ಹುಲಿಯನ್ನು ಕೊಲ್ಲಬೇಕು, ಅಲ್ಲಿಯ ತನಕ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ನೀಡುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿ.ಪಂ ಸದಸ್ಯ ಮುಕ್ಕಾಟೀರ ಶಿವುಮಾದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಶ್ರೀಮಂಗಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಮಚ್ಚಮಾಡ ಕಾರ್ಯಪ್ಪ, ಮಚ್ಚಮಾಡ ಅನೀಶ್ ಮಾದಪ್ಪ, ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷ ಅಜ್ಜಮಾಡ ಜಯ, ಗ್ರಾ.ಪಂ ಸದಸ್ಯ ಮಾದೀರ ಸುದಿಪೊನ್ನಪ್ಪ, ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್, ಸಂಚಾಲಕ ಪುಚ್ಚಿಮಾಡ ಸುಭಾಸ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆÀಟ್ಟಂಗಡ ಕಾರ್ಯಪ್ಪ, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಅಪ್ಪಚಂಗಡ ಮೋಟಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಅಲೇಮಾಡ ಮಂಜುನಾಥ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಅಪ್ಪಚಂಗಡ ಮೋಟಯ್ಯ ಕೊಡಗು ಬೆಳೆಗಾರ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ, ಈ ಸಂದರ್ಭ ರೈತ ಸಂಘದ ಮುಖಂಡ ಬಾಚಂಗಡ ಭವಿಕುಮಾರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತೀತಿರ ಧರ್ಮಜ ಉತ್ತಪ್ಪ, ಮುಕ್ಕಾಟೀರ ಸಂದೀಪ್, ಕಾಳಿಮಾಡ ಪ್ರಶಾಂತ್, ಕಾಳಿಮಾಡ ದಿಲೀಪ್, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೋಟ್ರಂಗಡ ತಿಮ್ಮಯ್ಯ, ತೀತಿರ ಮಂದಣ್ಣ ಮತ್ತು ಇತರರು ಹಾಜರಿದ್ದರು.

ಪೊಲೀಸ್ ಇಲಾಖೆಯ ಬಂದೋಬಸ್ತನ್ನು ವೀರಾಜಪೇಟೆ ಡಿವೈಎಸ್‌ಪಿ ಜಯಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್, ಶ್ರೀಮಂಗಲ ಉಪನಿರೀಕ್ಷಕ ರವಿಶಂಕರ್, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

ಇದರ ನಡುವೆ ವೀರಾಜಪೇಟೆ ಡಿ.ಎಫ್.ಓ. ಚಕ್ರಪಾಣಿ ಅವರು ಸ್ಥಳಕ್ಕೆ ಆಗಮಿಸುವ ವೇಳೆ ಈ ಸ್ಥಳದಲ್ಲಿ ೧೪೪ ಸೆಕ್ಷನ್ ಹಾಕಿದರೆ ಮಾತ್ರ ನಾನು ಬರುತ್ತೇನೆ ಎಂದು ಪೊಲೀಸ್ ಅಧಿಕಾರಿಗಳೊಂದಿಗೆ ಹೇಳುತ್ತಿದ್ದ ವಿಚಾರ ಕೇಳಿಸಿಕೊಂಡ ಪ್ರತಿಭಟನಾ ಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

ಮಧ್ಯಾಹ್ನ ೧೨ ಗಂಟೆ ವೇಳೆಗೆ ಆಗಮಿಸಿದ ಹಿರಾಲಾಲ್ ಮತ್ತು ೧.೩೦ ಗಂಟೆಗೆ ಬೆಂಗಳೂರಿನಿAದ ಆಗಮಿಸಿದ ಎ.ಪಿ.ಸಿ.ಸಿ.ಎಫ್ ಬಿ.ಪಿ.ರವಿ ಅವರನ್ನು ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸಿಸಿಎಫ್ ಮತ್ತು ಎಪಿಸಿಸಿಎಫ್ ಅವರು ಹುಲಿ ಸೆರೆ ಮತ್ತು ಕಾರ್ಯಾಚರಣೆ ಸಂದರ್ಭ ಪ್ರಾಣಾಪಾಯ ಎದುರಾಗುವ ಸಂದರ್ಭ ಹುಲಿಗೆ ಗುಂಡು ಹಾರಿಸಿ ಕೊಲ್ಲಲು ವಾಟ್ಸಾಪ್ ಮೂಲಕ ರವಾನಿಸಿದ ಅನುಮತಿ ಪತ್ರವನ್ನು ಪ್ರತಿಭಟನಾಕಾರರ ಎದುರು ಓದಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಒಪ್ಪಿ ಪ್ರತಿಭಟನೆಯನ್ನು ಸ್ಥಗಿತ ಗೊಳಿಸಲಾಯಿತು.

ಕುಟುಂಬಕ್ಕೆ ಆರ್ಥಿಕ ನೆರವು

ಶ್ರೀಮಂಗಲ ಹೋಬಳಿಯಲ್ಲಿ ಎರಡು ಕಡೆ ಹುಲಿ ದಾಳಿಯಿಂದ ಮೃತ ಪಟ್ಟ ಕುಟುಂಬದವರಿಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು.

ಈ ಸಂದರ್ಭ ಪ್ರಮುಖರಾದ ಮಾಣೀರ ಉಮೇಶ್, ಮಲ್ಲಂಡ ಮಧುದೇವಯ್ಯ, ಮಚ್ಚಮಾಡ ಮುರುಳಿ, ಮಾಣೀರ ವಿಜಯನಂಜಪ್ಪ, ಚೋಕಿರ ಕಲ್ಪನ ತಿಮ್ಮಯ್ಯ, ಮತ್ತಿತರರು ಹಾಜರಿದ್ದರು.

ಮೃತದೇಹವಿಟ್ಟು ಪ್ರತಿಭಟನೆ

ಶ್ರೀಮಂಗಲ ಬಸ್ ನಿಲ್ದಾಣದಲ್ಲಿ ಹುಲಿ ದಾಳಿಯಿಂದ ಮೃತ ಪಟ್ಟ ಬಾಲಕನ ಮೃತ ದೇಹವಿಟ್ಟು ಸಾರ್ವಜನಿಕರು ಕೆಲಕಾಲ ಪ್ರತಿಭಟನೆ ನಡೆಸಿದರು. ಒಂದು ಗಂಟೆ ಎಲ್ಲಾ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ವಕೀಲ ಎಂ. ಟಿ. ಕಾರ್ಯಪ್ಪ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಟ್ರಮಾಡ ತಿಮ್ಮಯ್ಯ, ಮಾದೀರ ಸುದಿ, ಕಾಳಿಮಾಡ ಪ್ರಶಾಂತ್, ಅಪ್ಪಯ್ಯ, ತೀತಿರ ಮಂದಣ್ಣ, ರೈತ ಸಂಘದ ಮುಖಂಡರು ಇದ್ದರು.