ಗೋಣಿಕೊಪ್ಪಲು, ಫೆ. ೨೧: ಅಕಾಲಿಕ ಮಳೆಗೆ ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ಸರ್ಕಾರ ಕೇವಲ ಕೆಲವು ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಿ ನೊಂದ ರೈತರಿಗೆ ಪರಿಹಾರ ವಿತರಿಸಿದೆ. ಆದರೆ ಇನ್ನುಳಿದ ರೈತರಿಗೆ ಇನ್ನು ಕೂಡ ಪರಿಹಾರ ಮಂಜೂರಾತಿಯಾಗಿಲ್ಲ. ಈ ನ್ಯೂನತೆಗಳನ್ನು ಸರಿಪಡಿಸಿ ನಷ್ಟ ಸಂಭವಿಸಿದ ಎಲ್ಲಾ ಗ್ರಾಮವನ್ನು ಸೇರಿಸುವ ಮೂಲಕ ಅರ್ಹ ರೈತರಿಗೆ ಪರಿಹಾರ ಒದಗಿಸುವಂತೆ ರೈತ ಸಂಘ ಮನವಿ ಮಾಡಿತ್ತು.
ದಕ್ಷಿಣ ಕೊಡಗಿನ ಶ್ರೀಮಂಗಲ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್ ಅವರಿಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಮನವಿ ಪತ್ರ ಸಲ್ಲಿಸಿದರು.
ಅಲ್ಪಾವಧಿ ಕೃಷಿ ಸಾಲದ ಶೂನ್ಯ ಬಡ್ಡಿ ದರದ ಅರ್ಹತೆಯನ್ನು ೫ ಲಕ್ಷಕ್ಕೆ ಹೆಚ್ಚಿಸಬೇಕು, ಎಕರೆವಾರು ಆಧಾರದಲ್ಲಿ ಸಾಲ ವಿತರಿಸಬೇಕು, ಆದಾಯ ತೆರಿಗೆ ಕಟ್ಟುತ್ತಿರುವ ರೈತರಿಗೆ ಪಿಂಚಣಿ ಸೌಲಭ್ಯ ನೀಡಬೇಕು. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವನ್ನು ಒಂದು ಕುಟುಂಬಕ್ಕೆ ೧೦ ಲಕ್ಷ ಮಿತಿಯ ನಿಗದಿಯನ್ನು ರದ್ದುಗೊಳಿಸಿ ಜಮೀನಿನ ಆಧಾರದಲ್ಲಿ ಸಾಲ ನೀಡಬೇಕು ಸೇರಿದಂತೆ ಇನ್ನಿತರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರು.