ವರದಿ-ಚಂದ್ರಮೋಹನ್
ಕುಶಾಲನಗರ, ಫೆ. ೨೧: ಕೊಡಗು ಜಿಲ್ಲೆಯ ಕುಶಾಲನಗರ ವ್ಯಾಪ್ತಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ತುಂಬಿದ ಎರಡು ಲಾರಿಗಳನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಡೆದಿದೆ.
ಕುಶಾಲನಗರ ಆನೆಕಾಡು ಅರಣ್ಯ ವಿಭಾಗದ ಅತ್ತೂರು ನಲ್ಲೂರು ವ್ಯಾಪ್ತಿಯಿಂದ ಎರಡು ಲಾರಿಗಳಲ್ಲಿ ತುಂಬಿ ಮರಗಳನ್ನು ಸಾಗಿಸುತ್ತಿದ್ದ ಸಂದರ್ಭ ಪರಿಶೀಲನೆ ವೇಳೆ ಲಾರಿಗಳಲ್ಲಿ ಅನುಮತಿಗಿಂತ ಹೆಚ್ಚು ಮರಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಇಬ್ಬರು ಚಾಲಕರನ್ನು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಆನೆಕಾಡು ಅರಣ್ಯ ವಿಭಾಗದ ಅತ್ತೂರು ನಲ್ಲೂರು ಬಳಿಯ ಕೆ.ಎಂ. ಪೊನ್ನಪ್ಪ ಎಂಬವರ ತೋಟದಿಂದ ಟಿಂಬರ್ಗಳನ್ನು ಸಾಗಿಸಲು ಅರಣ್ಯ ಅಧಿಕಾರಿಗಳಿಂದ ಪರವಾನಗಿ ಪಡೆದಿದ್ದು (ಕೆಎ. ೧೨. ಬಿ. ೭೬೩೭) ಹಾಗೂ (ಕೆಎ. ೧೨. ಬಿ. ೦೨೭೩) ನೋಂದಣಿಯುಳ್ಳ ಲಾರಿಗಳಲ್ಲಿ ಮಡಿಕೇರಿ ಮೂಲಕ ಮಂಗಳೂರಿಗೆ ಸಾಗಿಸಲು ಅನುಮತಿ ಕಲ್ಪಿಸಲಾಗಿತ್ತು. ಲಾರಿಯೊಂದರಲ್ಲಿ ೨೦ ಮರಗಳು, ಇನ್ನೊಂದರಲ್ಲಿ ೨೬ ಮರಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದ್ದು ಎರಡೂ ಲಾರಿಗಳಲ್ಲಿ ೧೬ ಮರಗಳು ಹೆಚ್ಚುವರಿ ಯಾಗಿ ಸಾಗಾಟ ಮಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇದರಲ್ಲಿ ಭಾರೀ ಮರ ದಂಧೆ ವಹಿವಾಟು ಉಂಟಾಗಿರುವ ಸಂಶಯಗಳು ಕಂಡುಬAದಿದ್ದು ಮಂಗಳೂರಿನ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ.
ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುರುಷೋತ್ತಮ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಹೆಚ್ಚುವರಿ ಮರಗಳ ಸಾಗಾಟಕ್ಕೆ ಅನುಮತಿ ಕಲ್ಪಿಸಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ‘ಶಕ್ತಿ’ಗೆ ಮಾಹಿತಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಮಂಗಳೂರಿನಲ್ಲಿ ಎರಡು ಪ್ರತ್ಯೇಕ ಕೇಸ್ಗಳು ದಾಖಲಾಗಿದೆ.
ಮಡಿಕೇರಿ ಮೂಲಕ ಸಂಪಾಜೆ ಅರಣ್ಯ ತಪಾಸಣಾ ಗೇಟ್ ಮತ್ತು ಜಾಲ್ಸೂರು ಬಳಿ ತಪಾಸಣಾ ಗೇಟ್ಗಳ ಸಿಬ್ಬಂದಿಗಳ ಕಣ್ತಪ್ಪಿಸಿ ಲಾರಿಗಳು ತೆರಳುವಲ್ಲಿ ಇಲಾಖಾ ಅಧಿಕಾರಿಗಳ ಕೈವಾಡ ಇರುವ ಬಗ್ಗೆಯೂ ಜನವಲಯದಲ್ಲಿ ಚರ್ಚೆಯಾಗುತ್ತಿದೆ. ಹೆಚ್ಚಿನ ತನಿಖೆ ನಡೆದಲ್ಲಿ ಸತ್ಯಾಂಶ ಹೊರಬೀಳಲಿದೆ.
ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಕಾಪಿ ತೋಟಗಳಿಂದ ಬೆಲೆಬಾಳುವ ಬೀಟೆ ಮರಗಳು ರಾತೋರಾತ್ರಿ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿದ್ದು ಇದರಲ್ಲಿ ಹೊರಜಿಲ್ಲೆಗಳ ಕೆಲವು ಮರ ವ್ಯಾಪಾರಸ್ಥರು ಹಾಗೂ ಇಲಾಖಾ ಅಧಿಕಾರಿ, ಸಿಬ್ಬಂದಿಗಳ ಪಾತ್ರದ ಬಗ್ಗೆ ಶಂಕೆ ವ್ಯಕ್ತಗೊಂಡಿದೆ.
ವಿಶೇಷವೆAದರೆ ಬೀಟೆ ಮರಗಳನ್ನು ಕಾಫಿ ತೋಟಗಳಿಂದ ತೋಟದ ಮಾಲೀಕರ ಗಮನಕ್ಕೆ ಬಾರದೆ ಕಳವು ಮಾಡುವ ದಂಧೆ ಕುಶಾಲನಗರ, ಸುಂಟಿಕೊಪ್ಪ, ಮಾಲ್ದಾರೆ ವ್ಯಾಪ್ತಿಯಲ್ಲಿ ಅಧಿಕಗೊಂಡಿದ್ದು, ಐಷಾರಾಮಿ ಕಾರುಗಳಲ್ಲಿ ಮರದ ತುಂಡುಗಳನ್ನು ಸಾಗಿಸುವ ದಂಧೆ ಹೆಚ್ಚಳವಾಗಿದೆ. ಇನ್ನೊಂದೆಡೆ ಕುಶಾಲನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರದ ಮಿಲ್ಗಳಿದ್ದು ಅಧಿಕಾರಿಗಳ ಕಣ್ತಪ್ಪಿಸಿ ರಾತೋರಾತ್ರಿ ಕೆಲವು ಮಿಲ್ಗಳಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಕೂಡ ದೂರುಗಳು ಕೇಳಿಬಂದಿವೆ.
ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ, ಸಂಪಾಜೆ ಗಡಿಭಾಗಗಳಲ್ಲಿ ಕೂಡ ಚೆಕ್ಪೋಸ್ಟ್ ಮೂಲಕ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವ ಬಗ್ಗೆ ಜನವಲಯದಲ್ಲಿ ಚರ್ಚೆಯಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನಹರಿಸುವಂತೆ ಪತ್ರಿಕೆ ಮೂಲಕ ಸಾರ್ವಜನಿಕರು ಕೋರಿದ್ದಾರೆ.
ಕುಶಾಲನಗರದಲ್ಲಿ ತಪಾಸಣಾ ಕೇಂದ್ರ ಹೊರತುಪಡಿಸಿದರೆ ಉಳಿದಂತೆ ಹೆದ್ದಾರಿಯಲ್ಲಿ ಯಾವುದೇ ತಪಾಸಣಾ ಕೇಂದ್ರಗಳು ಇಲ್ಲದಿರುವುದು ಕಳ್ಳಸಾಗಣೆಗೆ ವರದಾನವಾದಂತಾಗಿದೆ. ಕುಶಾಲನಗರ ಪಟ್ಟಣ ವ್ಯಾಪ್ತಿಯ ಮಿಲ್ಗಳು ಮತ್ತು ತಪಾಸಣಾ ಗೇಟ್ಗಳಲ್ಲಿ ಮರ ಸಾಗಾಟ ಪರಿಶೀಲನೆಗೆ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಕೂಡ ಇಲಾಖೆಗೆ ಸಾರ್ವಜನಿಕರಿಂದ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಬೆಲೆಬಾಳುವ ಮರಗಳು ಅಕ್ರಮವಾಗಿ ಸಾಗಾಟಗೊಳ್ಳುವುದನ್ನು ತಪ್ಪಿಸಲು ಹಿರಿಯ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.