ಮಡಿಕೇರಿ, ಫೆ. ೨೦: ೨೦೧೮ ರಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗ ಳಾಗುತ್ತಿದ್ದು, ನಿನ್ನೆ ದಿನ ಕೂಡ ಶನಿವಾರಸಂತೆಯಲ್ಲಿ ಆಲಿಕಲ್ಲು ಮಳೆ ಬಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಕುರಿತು ಯುವ ವಿಜ್ಞಾನಿಗಳು ಸಂಶೋಧನೆ ನಡೆಸುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಉಪಾಧ್ಯಕ್ಷ ಬೇಬಿ ಮ್ಯಾಥ್ಯೂ ಅವರು ಕಿವಿಮಾತಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮಡಿಕೇರಿ ನಗರ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜಿನಲ್ಲಿ ನಡೆದ ಯುವ ವಿಜ್ಞಾನಿ ಆಯ್ಕೆ ಸ್ಪರ್ಧೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ದೀಪ ಬೆಳಗಿಸುವ ಮೂಲಕ ನಡೆಯುವ ಉದ್ಘಾಟನೆ, ಇಂದು ಗಿಡಕ್ಕೆ ನೀರು ಹಾಕುವ ಮೂಲಕ ವಿಭಿನ್ನವಾಗಿ ನಡೆದಿದ್ದು, ಬೆಳಕಿನಷ್ಟೆ ಪ್ರಾಮುಖ್ಯತೆ ಪ್ರಕೃತಿಯ ಉಸಿರಾಗಿರುವ ಗಿಡಗಳಿಗೆ ದೊರಕಬೇಕೆಂದರು. ವಿಜ್ಞಾನ ಸ್ಪರ್ಧೆಯ ಸದುಪಯೋಗಪಡೆಸಿ ಕೊಳ್ಳುವಂತೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಟಿ.ಜಿ. ಪ್ರೇಮ್ ಕುಮಾರ್ ಅವರು, ಬಾಲ್ಯದಲ್ಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ವೈಜ್ಞಾನಿಕ ಮನೋಭಾವನೆ, ಸಂಶೋಧನಾ ಛಲ ಬೆಳೆಸಿ ಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಂತ್ರಿಕ ಅಧಿವೇಶನವನ್ನು ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ಕಾಂತರಾಜ್ ಮಾತನಾಡಿ ಪ್ರತಿ ಮಗುವಿನಲ್ಲಿಯೂ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹ ದೊರಕಬೇಕಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ವಿಜ್ಞಾನವನ್ನು ಬೆಳೆಸಿ, ಪರಿಸರ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು.
ಸಮಗ್ರ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಧಿಕಾರಿ ಕೃಷ್ಣಪ್ಪ ಮಾತನಾಡಿ ಭೂಮಿ ನಮ್ಮ ಆಸೆಯನ್ನು ಪೂರೈಸಲು ಸಹಕಾರಿಯಾಗಿದೆ. ನಮ್ಮ ದುರಾಸೆಯನ್ನು ಪೂರೈಸುವ ಕೆಲಸವನ್ನು ನಾವು ಮಾಡಬಾರದು.
ಆದ್ದರಿಂದ ಮಾಲಿನ್ಯ ತಡೆ, ಪರಿಸರ ರಕ್ಷಣೆಗೆ ಯುವ ವಿಜ್ಞಾನಿಗಳಿಂದ ಸಂಶೋಧನೆಗಳಾಗ ಬೇಕಿದೆ ಎಂದರು. ನಗರ ರೋಟರಿ ಮಿಸ್ಟಿ ಹಿಲ್ಸ್ನ ಉಪಾಧ್ಯಕ್ಷ ಧನಂಜಯ ಅವರು ಮಾತನಾಡಿ ವಿಜ್ಞಾನ ಸ್ಪರ್ಧೆಯಲ್ಲಿ ಬಹುಮಾನ ದೊರಕದಿದ್ದರೆ ನಿರಾಸೆ ಗೊಳ್ಳಬಾರದು. ಸ್ಪರ್ಧೆಗಳಲ್ಲಿ ನಿರಂತರವಾಗಿ ಭಾಗವಹಿಸ ಬೇಕೆಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಆಯುಕ್ತ ಜಿಮ್ಮಿ ಸಿಕ್ವೇರ ಮಾತನಾಡಿ ಹೊಸ ಆವಿಷ್ಕಾರಗಳು ಬಂದೊಡನೆ ಕುತೂಹಲದಿಂದ ಅದರ ತಯಾರಿ, ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಯುವ ವಿಜ್ಞಾನಿಗಳಲ್ಲಿರಬೇಕೆಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಿಜಯ, ಕಾರ್ಯಕ್ರಮದ ನೋಡಲ್ ಅಧಿಕಾರಿ ಎಸ್.ಟಿ. ವೆಂಕಟೇಶ್, ಉಪ ಪ್ರಾಂಶುಪಾಲೆ ಸೌಮ್ಯಲತ, ಸ್ಪರ್ಧೆಯ ಸಂಯೋಜಕ ಹರ್ಷ, ಸಂಪನ್ಮೂಲ ಶಿಕ್ಷಕರಾದ ಈಶ, ಶ್ರೀನಾಥ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಟ್ಟರಂಗನಾಥ್ ಉಪಸ್ಥಿತರಿದ್ದರು. ಒಟ್ಟು ೧೪ ಯುವ ವಿಜ್ಞಾನಿಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.