ಸಿದ್ದಾಪುರ, ಫೆ. ೨೦: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮೊದಲ ವರ್ಷದ ವಾರ್ಷಿಕೋತ್ಸವ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತೀತಮಾಡ ರೀನಾ ತುಳಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆಟೋ ಚಾಲಕರ ಸಂಘವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೀರಾಜಪೇಟೆ ಆಟೋ ಚಾಲಕರ ಸಂಘದ ಪ್ರಮುಖ ಶಶಿಧರ್ ಮಾತನಾಡಿ, ಸಿದ್ದಾಪುರದ ಆಟೋ ಮಾಲೀಕರ ಮತ್ತು ಚಾಲಕರ ಸಂಘವು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಜಿಲ್ಲೆಯಲ್ಲಿ ಮಾದರಿ ಸಂಘವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಸಿದ್ದಾಪುರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಮೋಹನ್ ರಾಜ್ ಮಾತನಾಡಿ ಆಟೋ ಚಾಲಕರು ತಮ್ಮ ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು ಹಾಗೂ ಕಾನೂನು ಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರ ಮಾಲೀಕರ ಸಂಘದ ವತಿಯಿಂದ ಜನಸೇವಾ ಟ್ರಸ್ಟ್ನ ಪ್ರಮುಖರಾದ ರಮೇಶ್ ಮತ್ತು ರೂಪ ದಂಪತಿ, ಹಿರಿಯ ಆಟೋ ಚಾಲಕ ಡೆನ್ನಿ ಮತ್ತು ಉಷಾ ದಂಪತಿ, ಆಟೋ ಚಾಲಕಿ ಹಾಗೂ ಗ್ರಾ.ಪಂ. ಸದಸ್ಯೆ ಸುಜಾತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ-ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ವಹಿಸಿದ್ದರು. ಕಚೇರಿ ದಾನಿ ರಫೀಕ್ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.