*ಗೋಣಿಕೊಪ್ಪಲು, ಫೆ. ೧೮: ಜಿಲ್ಲೆಯಲ್ಲಿ ಹೆಚ್ಚಾಗಿ ಪೋಕ್ಸೊ ಕಾಯಿದೆಗಳು ವರದಿಯಾಗುತ್ತಿದ್ದು, ವೀರಾಜಪೇಟೆ ತಾಲೂಕಿನಲ್ಲೇ ಅತೀ ಹೆಚ್ಚು ಪೋಕ್ಸೊ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಅವರು ಕಳವಳ ವ್ಯಕ್ತಪಡಿಸಿದರು.

ಕಾವೇರಿ ಕಾಲೇಜು ಎನ್.ಸಿ.ಸಿ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ನಡೆದ ಕಾನೂನು ಅರಿವು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಕಾನೂನಿನ ಪ್ರಾಥಮಿಕ ಮೂಲವನ್ನು ಅರಿತುಕೊಳ್ಳುವುದು ಒಳಿತು. ಇದರಿಂದ ಸಮಾಜದಲ್ಲಿ ನಡೆಯುವ ದುರ್ಘಟನೆಗಳ ಬಗ್ಗೆ ಮತ್ತು ನೊಂದವರ ಸಂಕಷ್ಟವನ್ನು ಪರಿಹರಿಸಲು ಸಹಾಯವಾಗಬಲ್ಲದು ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.

ಶೈಕ್ಷಣಿಕ ಸಮಯದಲ್ಲಿ ವಿದ್ಯಾರ್ಥಿಗಳು ಪ್ರೀತಿ, ಪ್ರೇಮ ಎಂದು ಕಳೆದು ಹೋಗದೆ ನಿಮ್ಮ ತಂದೆ ತಾಯಿಗಳು ಮತ್ತು ಗುರುಗಳಿಗೆ ಆಭಾರಿಯಾಗಿ ನಡೆದುಕೊಳ್ಳಬೇಕು. ತಮ್ಮ ಮಕ್ಕಳು ಕಲಿಕೆಯ ಸಮಯದಲ್ಲಿ ಮಾಡುವ ಚಟುವಟಿಕೆಗಳ ಬಗ್ಗೆ ಮತ್ತು ಶಾಲೆಗೆ ತೆರಳಿದ ನಂತರ ಮಕ್ಕಳ ನಡವಳಿಕೆಯ ಬಗ್ಗೆ ಪೋಷಕರು ಗಮನ ಹರಿಸಿದರೆ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಮಕ್ಕಳು ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಮಕ್ಕಳಲ್ಲಿ ಸಕಾರತ್ಮಕ ಮನೋಭಾವಗಳನ್ನು ತುಂಬಲು ಮನೆ ಮತ್ತು ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಡುವ ಮೂಲಕ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಸಹಕಾರ ನೀಡಬೇಕು ಎಂದು ತಿಳಿಸಿದರು. ಜಿಲ್ಲೆಯ ಬಾಲಾಪರಾಧ ಸುಧಾರಣಾ ಸೆರೆಮನೆಗಳಲ್ಲಿ ಹೆಚ್ಚಾಗಿ ಮಾದಕ ದ್ರವ್ಯಗಳ ಸೇವನೆಯಿಂದ ಬಂಧಿಯಾಗಿರುವವರನ್ನು ಕಾಣ ಬಹುದಾಗಿದೆ. ಉತ್ತಮ ವಾತಾವರಣ ಕಲ್ಪಿಸಿಕೊಡದೆ ಇರುವುದರ ಪರಿಣಾಮ ಈ ವ್ಯವಸ್ಥೆಗೆ ಕಾರಣವಾಗಿದೆ. ಇದಕ್ಕೆ ಇಡೀ ಸಮಾಜವೇ ಹೊಣೆ ಎಂದು ಹೇಳಿದರು.

ನೊಂದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಹೋದಾಗ ದೂರು ಸ್ವೀಕರಿಸದೇ ಇದ್ದ ಸಂದರ್ಭದಲ್ಲಿ ಆತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಅವಕಾಶವಿದೆ. ಅಲ್ಲಿಯೂ ಸ್ವೀಕೃತವಾಗಿಲ್ಲ ಎಂದ ಪಕ್ಷದಲ್ಲಿ ನ್ಯಾಯಾಲಯದಲ್ಲಿ ದೂರು ದೂರು ನೀಡಬಹುದು ಎಂದು ಮಾಹಿತಿ ನೀಡಿದರು.

ವಿವಿಧ ಅಪಘಾತಗಳ ಪರಿಹಾರ ನಿಧಿಯಲ್ಲಿ ಇತ್ತೀಚಿನ ಕೆಲ ತಿಂಗಳಲ್ಲಿ ಸುಮಾರು ೧ ಕೋಟಿ ೩೩ ಲಕ್ಷ ಪರಿಹಾರ ಧನವನ್ನು ನ್ಯಾಯಾಲಯದ ಮೂಲಕ ನೀಡಲಾಗಿದೆ ಎಂದು ಮಾಹಿತಿ ನೀಡಿದ ನ್ಯಾಯಾಧೀಶರು ಪ್ರಾಥಮಿಕ ಕಾನೂನು ನಿಯಮಗಳಾದ ಎಫ್.ಐ.ಆರ್, ಚಾರ್ಜ್ ಶೀಟ್‌ಗಳ ಬಗ್ಗೆ ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ವಿ. ಕುಸುಮಾದರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಐ.ಕ್ಯೂ.ಎ.ಸಿ. ಸಂಚಾಲಕಿ ಭಾರತಿ, ಎನ್.ಸಿ.ಸಿ. ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಲೋಲಾಕ್ಷಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಜೋಯ್ಯಪ್ಪ ಉಪಸ್ಥಿತರಿದ್ದರು.