ಸೋಮವಾರಪೇಟೆ, ಫೆ. ೧೮: ಜಾತ್ಯತೀತ ಜನತಾದಳ ಕೇವಲ ಒಕ್ಕಲಿಗರ ಪಕ್ಷವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದು, ತತ್ವ ಮತ್ತು ಸಿದ್ಧಾಂತದೊAದಿಗೆ ಸಮಾಜದ ಎಲ್ಲಾ ಸಮುದಾಯಕ್ಕೆ ಸ್ಥಾನಮಾನ ಕೊಟ್ಟ ಏಕೈಕ ಪಕ್ಷ ಜೆಡಿಎಸ್ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತ್ಯತೀತ ಜನತಾದಳ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಿಸಲು ಪಕ್ಷದ ಕಾರ್ಯಕರ್ತರೇ ಕಾರಣ. ಕೊಡಗಿನಲ್ಲಿ ಪಕ್ಷ ಬಲಿಷ್ಠವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ೧೩೦ ಸ್ಥಾನಗಳನ್ನು ಗಳಿಸಿರುವುದೇ ಸಾಕ್ಷಿಯಾಗಿದೆ ಎಂದು ಪ್ರಜ್ವಲ್ ರೇವಣ್ಣ ಅಭಿಪ್ರಾಯಿಸಿದರು.

ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳ ಬೆಳೆಗಾರರಿಗೆ ಬಜೆಟ್‌ನಲ್ಲಿ ಯಾವುದೇ ಪ್ರಯೋಜನಕಾರಿಯಾದ ಕೊಡುಗೆ ನೀಡಿಲ್ಲ ಎಂದು ಪ್ರಜ್ವಲ್ ದೂರಿದರು.

ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಬಡ್ಡಿ ಮುಕ್ತ ಸಾಲವನ್ನು ನೀಡಿ ಎಂದು ಮನವಿ ಮಾಡಿದ್ದರೂ ಬಜೆಟ್‌ನಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಕಾಫಿ ಬೆಳೆಯುವ ಪ್ರದೇಶಗಳನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು ಹಾಗೂ ಶಾಸಕರು ಇದರ ಬಗ್ಗೆ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಧ್ವನಿ ಎತ್ತಲಿಲ್ಲ. ಇನ್ನೇಕೆ ಬಿಜೆಪಿಗೆ ಮತ ನೀಡಬೇಕೆಂದು ಪ್ರಶ್ನಿಸಿದ ಅವರು, ಕೊಡಗಿನಲ್ಲಿ ಪ್ರಕೃತಿ ವಿಕೋಪ ನಡೆದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಲ್ಲಿಯವರ ನೋವಿಗೆ ಸ್ಪಂದಿಸಿದ್ದಾರೆ ಎಂದು ಸ್ಮರಿಸಿದರು.

ಮುಂಬರುವ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಬೇಕಾದರೆ ಕಾರ್ಯಕರ್ತರ ಶ್ರಮ ಮುಖ್ಯ. ಮುಖಂಡರುಗಳು ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ಪಕ್ಷ ಸಂಘಟನೆೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಡಿಕೇರಿ ಕ್ಷೇತ್ರದ ಸಮಿತಿಯನ್ನು ಪುನರ್ ರಚಿಸಲಾಗುವುದು. ಮಡಿಕೇರಿ, ಸೋಮವಾರಪೇಟೆ ಹಾಗೂ ಕುಶಾಲನಗರಕ್ಕೆ ಪ್ರತ್ಯೇಕವಾಗಿ ಕೋರ್ ಕಮಿಟಿಯನ್ನು ರಚಿಸಲಾಗುವುದು. ವೈಯುಕ್ತಿಯ ಕಾರಣದಿಂದಾಗಿ ಜೀವಿಜಯ ಅವರು ಜೆಡಿಎಸ್ ತೊರೆದಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಕಾರ್ಯಕರ್ತರೇ ಪಕ್ಷದ ಆಸ್ತಿ ಎಂದು ಪ್ರಜ್ವಲ್ ಹೇಳಿದರು.

ಸಭೆಯಲ್ಲಿ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್, ಪ್ರಮುಖರಾದ ಬಗ್ಗನ ಅನಿಲ್, ಕೊಡ್ಲಿಪೇಟೆ ತಮ್ಮಯ್ಯ, ಜಾನಕಿ ವೆಂಕಟೇಶ್, ಕಾಟ್ನಮನೆ ವಿಠಲ, ಜಯಾನಂದ, ಜಯಂತಿ ಶಿವಕುಮಾರ್, ಜಲಾ ಹೂವಯ್ಯ, ಕೆ.ಟಿ. ಪರಮೇಶ್, ಡಿ.ಎಸ್. ಚಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.