ಸೋಮವಾರಪೇಟೆ, ಫೆ. ೧೭: ರೂ. ೮ ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ನಡೆಯುತ್ತಿರುವ ತಾಲೂಕಿನ ಕುಂದಳ್ಳಿ, ಕುಮಾರಳ್ಳಿ, ಬೀದಳ್ಳಿ ಮಾರ್ಗದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕುಮಾರಳ್ಳಿ, ಬೀದಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕುಮಾರಳ್ಳಿ ಗ್ರಾಮದಲ್ಲಿರುವ ಅಯಾತನ ರೆಸಾರ್ಟ್ ಸಮೀಪದ ರಸ್ತೆಯಲ್ಲಿ ಡಾಂಬರು ಹಾಕಿದ ಒಂದೇ ದಿನದಲ್ಲಿ ಕಿತ್ತುಬರುತ್ತಿದೆ. ಸಂಬAಧಿಸಿದ ಇಲಾಖೆಯ ಅಭಿಯಂತರರು ಕಾಮಗಾರಿ ನಡೆಯುವ ಸಂದರ್ಭ ಸ್ಥಳದಲ್ಲಿ ಇರದ ಕಾರಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸ್ಥಳಕ್ಕೆ ಸಂಬAಧಿಸಿದ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಆಗಮಿಸಬೇಕೆಂದು ಪಟ್ಟು ಹಿಡಿದು, ಸಮಸ್ಯೆಯ ಬಗ್ಗೆ ಇಲಾಖೆಯ ಗಮನಕ್ಕೆ ತಂದರು. ನಂತರ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಹಾಗೂ ಇಂಜಿನಿಯರ್ ರಮಣೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕಿತ್ತುಹೋಗಿರುವ ೨೦೦ ಮೀಟರ್‌ನಷ್ಟು ರಸ್ತೆಯನ್ನು ಮರು ಡಾಂಬರೀಕರಣ ಮಾಡುವಂತೆ ಗುತ್ತಿಗೆದಾರರಿಗೆ ಎಇಇ ಸೂಚಿಸಿದರು. ರಾತ್ರಿ ಸಮಯದಲ್ಲಿ ಡಾಂಬರು ಹಾಕುತ್ತಿರುವುದರಿಂದ ಕಾಮಗಾರಿ ಕಳಪೆಯಾಗಿದೆ ಎಂದು ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್‌ಕುಮಾರ್ ದೂರಿದರು. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ನೀಡುವದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಮ್ಮಯ್ಯ, ಹರೀಶ್, ಗಿರೀಶ್, ದೇಶ್‌ರಾಜ್, ಉದಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.