ಪೊನ್ನಂಪೇಟೆ, ಫೆ. ೧೭: ಪೊನ್ನಂಪೇಟೆ ತಾಲೂಕಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ರಾತ್ರಿ ಬಲ್ಯಮಂಡೂರು ಗ್ರಾಮದ ಕೊಟ್ಟಂಗಡ ವಿಶು ಬೋಪಣ್ಣ ಎಂಬವರ ಕರು ವ್ಯಾಘ್ರನ ದಾಳಿಗೆ ಬಲಿಯಾಗಿದೆ.
ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ದಾಳಿ ನಡೆಸಿರುವ ಹುಲಿ, ಕರುವನ್ನು ಕೊಂದು ಕೊಟ್ಟಿಗೆಯಿಂದ ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಅರಣ್ಯ ಇಲಾಖೆ ಕೂಡಲೇ ಹುಲಿಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಬಲ್ಯಮಂಡೂರು ಗ್ರಾ. ಪಂ. ಸದಸ್ಯ ಕೊಟ್ಟಂಗಡ ಅಯ್ಯಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
'ಶಕ್ತಿ'ಯೊಂದಿಗೆ ಮಾತನಾಡಿದ ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ರಾಜಪ್ಪ ಈ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಸೆರೆ ಹಿಡಿದಿರುವ ದೃಶ್ಯಗಳ ಆಧಾರದಲ್ಲಿ ಎರಡು ಹುಲಿಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ಸರ್ಕಾರದಿಂದ ಹುಲಿ ಹಿಡಿಯಲು ಅನುಮತಿ ಸಿಕ್ಕ ಕೂಡಲೇ ಹುಲಿ ಸೆರೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದೆ. ಉಪ ವಲಯ ಅರಣ್ಯಧಿಕಾರಿ ದಿವಾಕರ್ ಹಾಗೂ ಅರಣ್ಯ ರಕ್ಷಕ ಸಿಬ್ಬಂದಿ ಇದ್ದರು.