ಕುಶಾಲನಗರ, ಫೆ. ೧೭: ಎರಡು ವರ್ಷಗಳ ಹಿಂದೆ ಪುಲ್ವಾಮ ದಾಳಿಯ ಸಂದರ್ಭ ಪ್ರಾಣ ಬಲಿದಾನ ಮಾಡಿದ ೪೦ ಕ್ಕೂ ಅಧಿಕ ವೀರ ಸಿಪಾಯಿಗಳ ಸಂಸ್ಮರಣಾ ಕಾರ್ಯಕ್ರಮ ಕೊಪ್ಪ ಗ್ರಾಮದಲ್ಲಿ ನಡೆಯಿತು. ಸ್ಥಳೀಯ ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಸೈನಿಕರ ತ್ಯಾಗವನ್ನು ನೆನೆದು ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಿ ಸ್ಮರಿಸುವ ಕಾರ್ಯಕ್ರಮ ನಡೆಯಿತು. ಕೊಪ್ಪ ಮುಖ್ಯ ವೃತ್ತದಿಂದ ಕಾವೇರಿ ಪ್ರತಿಮೆ ತನಕ ಹಲವು ಕಾರ್ಯಕರ್ತರು ಕ್ಯಾಂಡಲ್ ಹಿಡಿದು ವೀರಯೋಧರ ಪರ ಘೋಷಣೆ ಕೂಗುತ್ತಾ ಹುತಾತ್ಮ ಸೈನಿಕರ ತ್ಯಾಗವನ್ನು ಸ್ಮರಿಸಿದರು. ನಂತರ ಒಂದು ನಿಮಿಷಗಳ ಮೌನಾಚರಣೆ ಮಾಡಿದರು. ಪುಲ್ವಾಮದಲ್ಲಿ ಅಗಲಿದ ಯೋಧರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ ಕಾರ್ಯಕರ್ತರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಯೋಧರಿಗೆ ನವಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಕೊಪ್ಪ ಗ್ರಾ.ಪಂ. ಅಧ್ಯಕ್ಷ ರೇಣುಕಾಸ್ವಾಮಿ, ಸದಸ್ಯ ನಾರಾಯಣ, ಹಿಂದೂಪರ ಸಂಘಗಳ ಪ್ರಮುಖರಾದ ನಟರಾಜ್, ನಳಿನಿ, ಶಶಿಕುಮಾರ್ ಮತ್ತಿತರರು ಇದ್ದರು.