ಮಡಿಕೇರಿ, ಫೆ. ೧೬: ಕರ್ಣಂಗೇರಿಯ ಕೇಂದ್ರ ಕಾರಾಗೃಹದಲ್ಲಿ ಮನೆಮನೆ ಕವಿಗೋಷ್ಠಿ ಪರಿವಾರದ ವತಿಯಿಂದ ಖೈದಿಗಳ ಮನರಂಜಿಸಲು ಹಾಸ್ಯ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಷಪ್ಪ ಅವರು ಮಾತನಾಡಿ, ಕವನಗಳು ಮನಸ್ಸಿನ ಬೇಗುದಿಯನ್ನು ಮರೆಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಕಾರ್ಯಕ್ರಮ ಉದ್ಘಾಟಿಸಿದರು. ಕಿಗ್ಗಾಲು ಎಸ್ ಗಿರೀಶ್, ಕಸ್ತೂರಿ ಗೋವಿಂದಮ್ಮಯ್ಯ, ನರ್ಸರಿ ವಸಂತ, ಹರೀಶ್ ಕಿಗ್ಗಾಲು ಹಾಗೂ ಗೋಷ್ಠಿಯ ಸಂಸ್ಥಾಪಕರಾದ ಪಿ ಎಸ್ ವೈಲೇಶ್ ಕವನಗಳನ್ನು ವಾಚಿಸಿದರು. ನ್ಯಾಯಾಧೀಶರಾದ ನೂರುನ್ನೀಸಾ ಅವರು ಸ್ಥಳದಲ್ಲಿಯೇ ಕವನವೊಂದನ್ನು ರಚಿಸಿ, ವಾಚಿಸಿ ಗಮನ ಸೆಳೆದರು. ಶ್ರೀದೇವಿ ಕಳಂಗಳೆ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.