ಮಡಿಕೇರಿ, ಫೆ. ೧೫: ಮಕ್ಕಂದೂರು ಗ್ರಾಮದ ಪ್ರೌಢಶಾಲೆ ಹತ್ತನೆ ತರಗತಿಯಲ್ಲಿ ಸತತವಾಗಿ ಶೇ. ೧೦೦ರ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆ, ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ದ.ಸಂ.ಸ. ವತಿಯಿಂದ ಮಕ್ಕಂದೂರು ಶಾಲೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದ ಮುಖ್ಯ ಅಥಿತಿಗಳಾಗಿ ಉದ್ಯಮಿ ಅಂಬೆಕಲ್ ಕುಶಾಲಪ್ಪ ಹಾಗೂ ಸುಶೀಲ ದಂಪತಿಗಳು ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಭಾಷಣಕಾರರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಡಿಕೇರಿಯ ಉದ್ಯಮಿ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹತ್ತನೇಯ ತರಗತಿ ಬಹುಮುಖ್ಯ ಘಟ್ಟವಾಗಿದ್ದು, ಈ ಘಟ್ಟದಲ್ಲಿ ಸಾಧಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಕೊಡಗಿನ ಸರಕಾರಿ ಫ್ರೌಢಶಾಲೆಯ ಶಿಕ್ಷಕರು ನಿಜಕ್ಕೂ ಶ್ಲಾಘನೀಯ ಕೆಲಸ ನಿರ್ವಹಿಸಿದ್ದು. ಅದರ ಫಲಿತಾಂಶ ನಮ್ಮ ಮುಂದಿದೆ. ಇವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಹಾಗೂ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ದಲಿತ ಸಂಘರ್ಷ ಸಮಿತಿ ಸೇವೆ ಶ್ಲಾಘನೀಯ ಎಂದು ಹೇಳಿದರು.

ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರಾಗಿರುವ ಶ್ರೀಹರಿ ಮಾತನಾಡಿ, ಯಾವದೇ ಹುದ್ದೆಗೇರಲು ಶಿಕ್ಷಣ ಮುಖ್ಯವಾಗಿದೆ. ಇಂತಹ ಶಿಕ್ಷಣವನ್ನು ನೀಡುವ ಗುರುಗಳು ವಂದನೀಯರು ಎಂದು ಶ್ಲಾಘಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆಯ ಉಪಸಂಪಾದಕ ಹಾಗೂ ಮಕ್ಕಂದೂರು ನಿವಾಸಿ ಕುಡೆಕಲ್ ಸಂತೋಷ್ ಮಾತನಾಡಿ ಹಳ್ಳಿ ಪ್ರದೇಶದ ಮಕ್ಕಳ ಕಷ್ಟಕಾರ್ಪಣ್ಯಗಳನ್ನು ಸ್ಮರಿಸಿ, ಆ ಕಷ್ಟದ ನಡುವೆಯೂ ಸಾಧಿಸಿರುವ ಮಕ್ಕಳ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಆ ಸಾಧನೆಗೆ ಮಕ್ಕಳನ್ನು ಸಜ್ಜುಗೊಳಿಸುವ ಶಿಕ್ಷಕರ ಶ್ರಮವನ್ನು ಈ ಸಂದರ್ಭ ಶ್ಲಾಘಿಸಿದರು. ಯಾವದೇ ಹಂತದಲ್ಲೂ ವಿದ್ಯಾರ್ಥಿಗಳು ಉತ್ತಮ ಆಯ್ಕೆಯೊಂದಿಗೆ ಗುರಿಸಾಧಿಸಬೇಕು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಿ ಪ್ರೋತ್ಸಾಹ ನೀಡಬೇಕು. ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲಾಗದು, ವಿದ್ಯೆ ಕಲಿಸುವ ಗುರುಗಳನ್ನು ಗೌರವಿಸಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಹೆಚ್.ಎಲ್. ದಿವಾಕರ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ, ಶಿಕ್ಷಕರೇ ನಿಜವಾದ ದೇವರುಗಳು; ಅವರನ್ನು ಗೌರವಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಏರಬೇಕು, ಅದೇ ನಮ್ಮ ಸಂಘಟನೆಯ ಗುರಿ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೧೦೦ರಷ್ಟು ಫಲಿತಾಂಶವನ್ನು ಸಾಧಿಸಿರುವ ಕೊಡಗಿನ ಎಲ್ಲಾ ಶಾಲೆಯ ಶಿಕ್ಷಕರನ್ನು ಸಂಘಟನೆಯು ಗುರುತಿಸಿ ಗೌರವಿಸುತ್ತಿದೆ ಎಂದು ಹೇಳಿದರು.

ಸ್ವಾಗತವನ್ನು ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್.ಎ.ಪಿ ಮಾಡಿದರೆ. ವಂದನಾರ್ಪಣೆಯನ್ನು ಶಾಲೆಯ ಪ್ರಾಂಶುಪಾಲ ಶುಕ್ರುದೇವೆ ಗೌಡ ನೆರವೇರಿಸಿದರು. ಸಭೆಯಲ್ಲಿ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಶ್ರೀಹರಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಾದಪ್ಪ, ಕುಡೆಕಲ್ ಸವಿತಾ ಸಂತೋಷ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

-ವರದಿ : ರಂಜಿತ್ ಕವಲಪಾರ