ಮಡಿಕೇರಿ, ಫೆ. ೧೫ : ಮಹಾಮಳೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಶೀಘ್ರ ಪುನರ್ವಸತಿ ಕಲ್ಪಿಸುವ ಸಂಬAಧ ಕ್ರಮವಹಿಸಬೇಕೆಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನೆಲ್ಯಹುದಿಕೇರಿ ನಿರಾಶ್ರಿತರ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ನಿರಾಶ್ರಿತರಿಗೆ ನೀಡಬೇಕಾಗಿರುವ ನಿವೇಶನವನ್ನು ಸಮತಟ್ಟುಗೊಳಿಸಿ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನಾನಿರತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಮಾತನಾಡಿ, ಒತ್ತುವರಿದಾರರಿಂದ ಪಡೆದುಕೊಂಡಿರುವ ಜಾಗದಲ್ಲಿ ಕತ್ತರಿಸಿರುವ ಮರಗಳನ್ನು ಕೂಡಲೇ ತೆರವು ಮಾಡಬೇಕು, ನಿವೇಶನ ಉದ್ದೇಶಿತ ಜಾಗದ ರಸ್ತೆಯನ್ನು ದುರಸ್ಥಿಗೊಳಿಸಬೇಕು, ಶೇ ೭೫ ರಷ್ಟು ಮನೆ ಹಾನಿಯಾದವರನ್ನು ನಿವೇಶನ ರಹಿತ ಪಟ್ಟಿಯಲ್ಲಿ ಸೇರಿಸಬೇಕು, ನಿರಾಶ್ರಿತರಿಗೆ ಮನೆ ಬಾಡಿಗೆ ನೀಡಬೇಕು, ಮನೆ ನಿರ್ಮಿಸಲು ಬಾಕಿ ಹಣ ನೀಡಬೇಕೆಂದು ಒತ್ತಾಯಿಸಿದರು.
ನಿರಾಶ್ರಿತೆ ಸಂಗೀತಾ ಮಾತನಾಡಿ, ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ೨ ವರ್ಷ ಕಳೆದರು ಮನೆ ನಿರ್ಮಿಸದೆ ಸರ್ಕಾರ ಕಡೆಗಣಿಸಿದೆ. ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದರು ಕೂಡ, ಇನ್ನೂ ನಿವೇಶನ ನೀಡಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ನಿರಾಶ್ರಿತರಾದ ಸಫಿಯಾ ಮಹಮ್ಮದ್, ಸಲ್ಮತ್, ಗಣೇಶ್, ಸೈನಾ ಸೇರಿದಂತೆ ಇನ್ನಿತರರು ಇದ್ದರು.