ಕುಶಾಲನಗರ, ಫೆ. ೧೨: ದೇಶದ ಎಲ್ಲೆಡೆ ಕೋವಿಡ್ ನಿಯಮ ಸಡಿಲಗೊಂಡಿದ್ದರೂ ಕುಶಾಲನಗರ ಸಮೀಪದ ಬೈಲುಕೊಪ್ಪ ಟಿಬೇಟಿಯನ್ ಶಿಬಿರದಲ್ಲಿ ಮಾತ್ರ ಇನ್ನೂ ನಿಯಮ ಸಡಿಲಗೊಂಡಿಲ್ಲ. ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದ ಪ್ರವಾಸಿ ಕೇಂದ್ರ ಎನಿಸಿರುವ ಗೋಲ್ಡನ್ ಟೆಂಪಲ್‌ಗೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಲಭಿಸಿಲ್ಲ. ಎಲ್ಲೆಡೆಯಿಂದ ಪ್ರವಾಸಿಗರು ಬಂದು ಪೆಚ್ಚು ಮೋರೆ ಹಾಕಿ ವಾಪಾಸ್ ಹೋಗುತ್ತಿರುವ ಚಿತ್ರಣ ಕಾಣಬಹುದು. ಕಳೆದ ಮಾರ್ಚ್ ೨೦ ರಿಂದ ಕೋವಿಡ್ ೧೯ ಹಿನ್ನೆಲೆ ಗೋಲ್ಡನ್ ಟೆಂಪಲ್‌ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು ಇನ್ನೂ ನಿರ್ಬಂಧ ತೆರವುಗೊಂಡಿಲ್ಲ.

ಮಾರ್ಚ್ ಅಂತ್ಯ ತನಕ ಗೋಲ್ಡನ್ ಟೆಂಪಲ್‌ಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ಗೋಲ್ಡನ್ ಟೆಂಪಲ್ ಮುಚ್ಚಲಾಗಿದೆ ಎನ್ನುವ ಮಾಹಿತಿ ದೊರಕುತ್ತಿದೆ. ಗೋಲ್ಡನ್ ಟೆಂಪಲ್ ಹೊರ ಆವರಣದಲ್ಲಿರುವ ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಲ್ಪಟ್ಟಿದ್ದು ಬೆರಳೆಣಿಕೆಯ ಅಂಗಡಿಗಳು ಗ್ರಾಹಕರಿಗಾಗಿ ಕಾದು ಕುಳಿತಿರುವ ದೃಶ್ಯ ಗೋಚರಿಸಿದೆ.

ಕಳೆದ ಒಂದು ವರ್ಷದಿಂದ ಪ್ರವಾಸಿಗರಿಲ್ಲದೆ ನಮ್ಮ ಅಂಗಡಿಯಲ್ಲಿ ವ್ಯಾಪಾರ ಸಂಪೂರ್ಣ ಕುಸಿದಿದೆ. ಇದರಿಂದ ಕುಟುಂಬ ಜೀವನ ಕೂಡ ನಿಭಾಯಿಸುವುದು ಕಷ್ಟಕರವಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿ ಮಣಿಕಂಠ. ಬಾಡಿಗೆ ಅಂಗಡಿಯಲ್ಲಿದ್ದು ಬಾಡಿಗೆ ಕಟ್ಟಲು ಕೂಡ ಸಮಸ್ಯೆ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ದಿನನಿತ್ಯ ೫೦ ರಿಂದ ೧೦೦ ಎಳನೀರು ಮಾರಾಟವಾಗುತ್ತಿದ್ದ ಜಾಗದಲ್ಲಿ ಇದೀಗ ಕೇವಲ ೫ ರಿಂದ ೬ ಎಳನೀರು ಖರ್ಚಾಗುತ್ತಿದೆ ಎನ್ನುವ ಲಕ್ಷಿö್ಮ, ಕಳೆದ ೨೦ ವರ್ಷಗಳಿಂದ ತಾನು ಈ ವ್ಯಾಪಾರದಲ್ಲಿ ತೊಡಗಿದ್ದೆ. ಇಷ್ಟೊಂದು ಕಷ್ಟ ಈ ಹಿಂದೆ ಬಂದಿರಲಿಲ್ಲ ಎಂದು ಕೊರೊನಾ ಅವಧಿಯ ಸಂಕಷ್ಟ ನೆನಪಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಹಣದ ಕೊರತೆ ಎದುರಾಗಿದೆ ಎನ್ನುತ್ತಾರೆ.

ಇದು ಗೋಲ್ಡನ್ ಟೆಂಪಲ್ ಸಮಸ್ಯೆಯಾಗಿದ್ದರೆ ಇತ್ತ ಲಾಮಾ ಕ್ಯಾಂಪ್ ಬೌದ್ಧ ವಿಹಾರಗಳ ಶಿಬಿರ ವೀಕ್ಷಣೆಗೆ ಕೂಡ ಯಾರಿಗೂ ಅವಕಾಶ ಇಲ್ಲ. ಲಾಮಾ ಕ್ಯಾಂಪ್‌ಗೆ ತೆರಳುವ ಪ್ರವೇಶದ್ವಾರದಲ್ಲಿ ಕಟ್ಟುನಿಟ್ಟಿನ ತಪಾಸಣೆ ಕಾರ್ಯ ಈಗಲೂ ನಡೆಯುತ್ತಿದೆ. ಒಳಭಾಗಕ್ಕೆ ಹೋಗುವುದಾಗಲಿ ಹೊರಭಾಗಕ್ಕೆ ಬರುವುದಾಗಲಿ ಅಷ್ಟು ಸುಲಭವಿಲ್ಲ. ದಿನದ ೨೪ ಗಂಟೆ ಕಾಲ ಈ ಗೇಟ್‌ನಲ್ಲಿ ಹದ್ದಿನ ಕಣ್ಣಿನ ರೀತಿಯಲ್ಲಿ ಬೌದ್ಧ ಭಿಕ್ಷÄಗಳ ತಂಡ ಕಾವಲುಪಡೆ ಕಾಯುತ್ತಿರುತ್ತದೆ. ಮೂರು ಪಾಳಿಯಲ್ಲಿ ನಡೆಯುತ್ತಿರುವ ಈ ರೀತಿಯ ತಪಾಸಣೆ ನಮ್ಮ ದೇಶದ ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯ ಕೃಷಿಕ ರಾಜು. ಇದೇ ತಪಾಸಣೆ ಗೇಟ್ ಮೂಲಕ ದೊಡ್ಡಹರವೆ ಸೇರಿದಂತೆ ಹಲವು ಹಳ್ಳಿಗಳಿಗೆ ಸ್ಥಳೀಯರು ಓಡಾಡಬೇಕಿದೆ. ಆದಷ್ಟು ಬೇಗನೆ ಗೇಟ್ ತೆರವುಗೊಳಿಸುವುದು ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಟಿಬೇಟಿಯನ್ನರ ನೂತನ ವರ್ಷ (ಲೋಸಾರ್) ಕೂಡ ತಾ. ೧೩ ರಂದು ಪ್ರಾರಂಭಗೊಳ್ಳಲಿದ್ದು, ಕೋವಿಡ್ ೧೯ ಹಿನ್ನೆಲೆ ಯಾವುದೇ ರೀತಿಯ ಸಂಭ್ರಮಾಚರಣೆ ಕಾರ್ಯಕ್ರಮಗಳು ಕೂಡ ನಡೆಯದೆ ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿ ವರ್ಷ ಲೋಸಾರ್ ಸಂದರ್ಭ ೧೫ ದಿನಗಳ ಕಾಲ ಇಡೀ ಶಿಬಿರದಲ್ಲಿ ಮನೆಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿತ್ತು. ಜೊತೆಗೆ ಗೋಲ್ಡನ್ ಟೆಂಪಲ್ ಆವರಣದಲ್ಲಿ ೧೫ ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುವುದರೊಂದಿಗೆ ವಿಶ್ವದ ಅತಿ ದೊಡ್ಡ ಚಿತ್ರಪಟಗಳನ್ನು ಕೂಡ ಪ್ರದರ್ಶನ ಮಾಡಲಾಗುತ್ತಿತ್ತು. ಈ ಸಂದರ್ಭ ಪ್ರಪಂಚದ ೫೦ಕ್ಕೂ ಅಧಿಕ ದೇಶಗಳಿಂದ ಟಿಬೇಟಿಯನ್ನರು ಹಾಗೂ ಪ್ರವಾಸಿಗರು ಶಿಬಿರಕ್ಕೆ ಭೇಟಿ ನೀಡುವುದು ವಾಡಿಕೆ ಯಾಗಿತ್ತು. ಏಪ್ರಿಲ್ ೧೦ ರ ನಂತರ ಗೋಲ್ಡನ್ ಟೆಂಪಲ್ ಸೇರಿದಂತೆ ಟಿಬೇಟಿಯನ್ ಶಿಬಿರದ ಭೇಟಿಗೆ ಮುಕ್ತ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ಶಿಬಿರದ ಪ್ರಮುಖರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. - ಎಂ.ಎನ್. ಚಂದ್ರಮೋಹನ್