ಸೋಮವಾರಪೇಟೆ, ಫೆ.೧೨: ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹದ ಬಳಿ ತೆರಳಿದವರಿಗೆ ಆಶ್ಚರ್ಯ ಕಾದಿತ್ತು. ಖಡಕ್ ಖಾಕಿ ಬಟ್ಟೆ ಧರಿಸಿ ಗಂಭೀರ ವದನದೊಂದಿಗೆ ಇರುತ್ತಿದ್ದ ಪೊಲೀಸರು, ಮಾಮೂಲಿ ಬಟ್ಟೆ ಧರಿಸಿ, ಕೈಯಲ್ಲಿ ಕತ್ತಿ, ಗುದ್ದಲಿ, ಕಳೆಕೊಚ್ಚುವ ಯಂತ್ರ, ತ್ಯಾಜ್ಯ ಸಂಗ್ರಹಣೆಯ ಬುಟ್ಟಿ ಹಿಡಿದು ಚರಂಡಿ ಶುಚಿಗೊಳಿಸುತ್ತಿದ್ದರು.
ಇದನ್ನು ಕಂಡ ಸಾರ್ವಜನಿಕರು ಕ್ಷಣ ಕಾಲ ತಬ್ಬಿಬ್ಬಾದರು. ಸ್ವತಃ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ದೇವರಾಜ್ ಅವರೇ ಶ್ರಮದಾನದಲ್ಲಿ ಭಾಗವಹಿಸಿ, ತ್ಯಾಜ್ಯವನ್ನು ತೆಗೆಯುತ್ತಿದ್ದರು.
ಪೊಲೀಸ್ ಠಾಣೆ, ವಸತಿ ಗೃಹದ ಸುತ್ತಮುತ್ತಲ ರಸ್ತೆ, ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊAಡು ಇಡೀ ವಾತಾವರಣ ಅಶುಚಿತ್ವದ ಆಗರವಾಗಿತ್ತು. ಇದನ್ನು ಹೀಗೆಯೇ ಬಿಟ್ಟರೆ ಮುಂದೊAದು ದಿನ ಇನ್ನಷ್ಟು ಗಬ್ಬೇಳುವ ಮುನ್ಸೂಚನೆ ಸಿಕ್ಕಿದ್ದರಿಂದ ಪಂಚಾಯಿತಿಯ ಪೌರಕಾರ್ಮಿಕರನ್ನು ಕಾಯದೇ ತಾವೇ ಸ್ವತಃ ಗುದ್ದಲಿ ಹಿಡಿದು ಶುಚಿಗೊಳಿಸುವ ಮೂಲಕ ಇತರರಿಗೆ ಮಾದರಿಯಾದರು.