*ಸಿದ್ದಾಪುರ, ಫೆ. ೧೨: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಪೊನ್ನತ್‌ಮೊಟ್ಟೆಯಲ್ಲಿ ಕೆಲವು ಮನೆಗಳಿಂದ ಹರಿದು ಬರುತ್ತಿರುವ ಚರಂಡಿ ನೀರು ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಎಲ್ಲಾ ಮನೆಗಳ ಕೊಳಚೆ ನೀರು ಹರಿದು ಬಂದು ಸ್ವಲ್ಪ ದೂರದಲ್ಲಿರುವ ಕೊಂಗೇಟಿರ ರಾಣುಪೂವಯ್ಯ ಅವರ ತೋಡಿಗೆ ಸೇರುತ್ತಿದೆ. ಈ ತೋಡು ಮುಂದೆ ಹರಿದು ಹೋಗುವ ಪ್ರದೇಶದಲ್ಲಿ ನಿವಾಸಿಗಳು ಬಟ್ಟೆ ಮತ್ತು ಪಾತ್ರೆಗಳನ್ನು ಕೂಡ ತೊಳೆಯುತ್ತಾರೆ. ಅಲ್ಲದೆ ದುರ್ವಾಸನೆ ಬೀರುವ ಕೊಳಚೆ ನೀರು ಮಿಶ್ರಿತವಾದ ತೋಡಿನ ನೀರು ಚಿಕ್ಲಿಹೊಳೆಯನ್ನು ಸೇರುತ್ತದೆ. ಈ ಅನಾರೋಗ್ಯಕರ ವಾತಾವರಣದ ಬಗ್ಗೆ ರಾಣು ಪೂವಯ್ಯ ಅವರು ಗ್ರಾಮ ಸಭೆಯಲ್ಲಿ ಗಮನ ಸೆಳೆದಿದ್ದರು.

ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂದೀಶ್ ಅವರನ್ನು ಒತ್ತಾಯಿಸಿದರು. ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳದಲ್ಲಿದ್ದು, ತಕ್ಷಣ ಇಂಗುಗುAಡಿ ವ್ಯವಸ್ಥೆ ಮಾಡಬೇಕು ಮತ್ತು ಎಲ್ಲೆಂದರಲ್ಲಿ ಕಸವನ್ನು ಹಾಕಲಾಗುತ್ತಿದ್ದು, ಕಸ ವಿಲೇವಾರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚನೆ ನೀಡಿದರು.