*ಗೋಣಿಕೊಪ್ಪಲು, ಫೆ. ೧೨: ಯರವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಾ. ೧೫ ರಂದು ವೀರಾಜಪೇಟೆ ತಾಲೂಕಿನ ಜಿಲ್ಲಾ ಯರವ ಯುವ ಒಕ್ಕೂಟ ಪೊನ್ನಂಪೇಟೆಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಯರವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್. ಮುತ್ತ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತ್ತ ಅವರು, ಶಿಕ್ಷಣದಿಂದ ವಂಚಿತರಾದ ಜನಾಂಗ ಸಮಾಜದ ಗೌರವಗಳನ್ನು ಪಡೆಯುವಲ್ಲಿ ಸೋಲುತ್ತಿದೆ. ಜನಾಂಗದ ಧ್ವನಿಯಾಗಿ ಉತ್ತಮ ನಾಯಕರ ಕೊರತೆ ಎದುರಾಗಿದೆ. ಹೀಗಾಗಿ ಯರವ ಜನಾಂಗ ಹಿಂದುಳಿದಿದ್ದು, ವಿನಾಶದ ಅಂಚಿಗೆ ತಲುಪಿದೆ. ಈ ಹಿನ್ನೆಲೆಯನ್ನು ಮನಗಂಡು ಯರವರನ್ನು ಪ್ರಿಮಿಟಿವ್ ಟ್ರೆöÊಬಲ್ಸ್ಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಲು ಮುಖ್ಯಮಂತ್ರಿಗಳ ಸಚಿವಾಲಯದಿಂದ ಶಿಫಾರಸ್ಸು ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಡಳಿತ ಮುಖಾಂತರ ಮನವಿ ಸಲ್ಲಿಸಲು ಒತ್ತಾಯಿಸಿ ಜಾಥಾ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಉದ್ಯೋಗ ಆಯ್ಕೆ ಪ್ರಾಧಿಕಾರ ರಚಿಸಲು ಮತ್ತು ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಕೊಡಗು ಜಿಲ್ಲೆಯ ಯರವ ಸಮುದಾಯಕ್ಕೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡುವಂತೆ ಈ ಸಂದರ್ಭ ಒತ್ತಾಯಿಸಲಾಗುವುದು. ಸರ್ಕಾರದ ಪರಿಶಿಷ್ಟ ವರ್ಗಗಳ ಪಟ್ಟಿಯಲ್ಲಿ ಸುಮಾರು ೫೩ ಸಮುದಾಯಗಳಿವೆ ಆದರೆ ಯರವ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ನಿವೇಶನ, ವಸತಿ ವ್ಯವಸ್ಥೆಗಳನ್ನು ಹೊಂದದೆ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಯರವರ ಅಭಿವೃದ್ಧಿಗೆ ವಾಲ್ಮೀಕಿ ನಿಗಮದಿಂದ ಶಾಸಕರ ಉಸ್ತುವಾರಿ ಮೂಲಕ ಅನುದಾನ ಪಡೆಯುವುದು ಅನಕ್ಷರಸ್ಥರಾದ ಜನಾಂಗಕ್ಕೆ ಅಸಾಧ್ಯವಾಗಿದೆ. ಹೀಗಾಗಿ ಯರವರಿಗೆ ಪ್ರತ್ಯೇಕವಾಗಿ ಮುಖ್ಯ ಮಂತ್ರಿಗಳು ಹಣ ಬಿಡುಗಡೆ ಮಾಡಬೇಕು ಎಂದು ಈ ಸಂದರ್ಭ ಮನವಿ ನೀಡಲಾಗುವುದು ಎಂದರು.
ಯರವರಿಗೆ ಪ್ರತ್ಯೇಕವಾಗಿ ಪ್ರತಿ ಕುಟುಂಬಕ್ಕೆ ೫ ಎಕ್ರೆ ಜಮೀನು ನೀಡುವಂತೆ, ಕೊವೀಡ್ -೧೯ ಮಹಾಮಾರಿಯಿಂದ ಯರವರು ನಲುಗಿ ಹೋಗಿದ್ದು, ಕೆಲಸಗಳಿಲ್ಲದೆ ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿರುವುದರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತಿ ಕುಟುಂಬಕ್ಕೆ ಐದು ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ವೃದ್ದಾಪ್ಯ, ಅಂಗವಿಕಲ ಹಾಗೂ ವಿಧಾವವೇತನ ೪ ತಿಂಗಳಿAದ ಫಲಾನುಭವಿಗಳಿಗೆ ದೊರೆತ್ತಿಲ್ಲ. ಈ ಬಗ್ಗೆಯೂ ಗಮನ ಹರಿಸುವ ಮೂಲಕ ದೇವರಪುರ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಾದ ಯರವ ಹಾಗೂ ಜೇನುಕುರುಬರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಹಾಗೂ ಯರವ ಜನಾಂಗಕ್ಕೆ ಸರ್ಕಾರದ ಎಲ್ಲಾ ರೀತಿಯ ಸವಲತ್ತುಗಳು ಶೀಘ್ರಗತಿಯಲ್ಲಿ ಸಿಗುವಂತೆ ಮನವಿ ಸಲ್ಲಿಸುವ ಮೂಲಕ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಅಧ್ಯಕ್ಷ ವೈ.ಸಿ. ಶಂಕ್ರು, ಕಾರ್ಯದರ್ಶಿ ವೈ.ಎಂ. ಸಿದ್ದು, ಸದಸ್ಯರುಗಳಾದ ಪಿ.ಬಿ. ರಾಜು, ಪಿ.ಎಂ. ರಾಮು, ಪಿ.ಜೆ. ಸುಬ್ರಮಣಿ, ಪಿ.ಸಿ. ಸುರೇಶ ಉಪಸ್ಥಿತರಿದ್ದರು.