ಸಿದ್ದಾಪುರ, ಫೆ. ೧೨: ಆಕಸ್ಮಿಕವಾಗಿ ಬೆಂಕಿ ತಗಲಿ ಕೈ ಸುಟ್ಟ ಗಾಯದಿಂದ ಬಳಲುತ್ತಿದ್ದ ಕಾರ್ಮಿಕನಿಗೆ ಸಿದ್ದಾಪುರದ ಆಟೋ ಮಾಲೀಕರ ಹಾಗೂ ಚಾಲಕರ ಸಂಘದವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕೇರಳ ಮೂಲದ ವ್ಯಕ್ತಿ ಸುರೇಶ್ ಎಂಬವರು ಈ ಹಿಂದೆ ಸಿದ್ದಾಪುರದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದರು. ನಂತರ ಈ ವ್ಯಕ್ತಿ ಸಕಲೇಶಪುರದಲ್ಲಿ ಕೆಲಸಕ್ಕೆಂದು ತೆರಳಿದ್ದರು.
ಅಲ್ಲಿನ ಕಾಫಿ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಈತನಿಗೆ ಪಿಡ್ಸ್ ಕಾಯಿಲೆ ಇರುವ ಹಿನ್ನೆಲೆಯಲ್ಲಿ ಈತ ಕೆಳಗೆ ಬೀಳುವ ಸಂದರ್ಭದಲ್ಲಿ ಕೈ ಬೆಂಕಿಗೆ ತಗಲಿದೆ ಎನ್ನಲಾಗಿದೆ. ಸುಟ್ಟಗಾಯ ಇರುವ ಹಿನ್ನೆಲೆಯಲ್ಲಿ ಇವರನ್ನು ಹಾಸನದ ಆಸ್ಪತ್ರೆಯೊಂದಕ್ಕೆ ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆ ಚಿಕಿತ್ಸೆಗೆ ಬೇಕಾದ ಹಣ ಇಲ್ಲದೇ ಹಾಗೂ ಈತನ ಬಳಿ ಪಡಿತರ ಇನ್ನಿತರ ದಾಖಲೆಗಳು ಇಲ್ಲದೇ ಈತ ಸಕಲೇಶಪುರ ಆಸ್ಪತ್ರೆಯಿಂದ ನೇರವಾಗಿ ಸಿದ್ದಾಪುರದತ್ತ ಬಂದಿದ್ದಾನೆ ಎನ್ನಲಾಗಿದೆ.
ಈತನ ಗಾಯಕ್ಕೆ ಸರಿಯಾದ ಚಿಕಿತ್ಸೆ ಪಡೆಯದೇ ಇರುವ ಕಾರಣ ಗಾಯವು ಹೆಚ್ಚಾಗಿದ್ದು, ಸಿದ್ದಾಪುರ ಪಟ್ಟಣದಲ್ಲಿ ಸುತ್ತಾಡುತ್ತಿದ್ದರು. ಈತನನ್ನು ಗುರುತಿಸಿದ ಸಿದ್ದಾಪುರದ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಪದಾಧಿಕಾರಿಗಳು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದರು. ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಹಾಜರಿದ್ದರು. - ವಾಸು