ಕುಶಾಲನಗರ, ಫೆ. ೧೨: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದೊಂದಿಗೆ ಭಾರತ ಸರಕಾರ ರಾಷ್ಟಿçÃಯ ಉದ್ಯೋಗ ವೃತ್ತ ಸೇವಾ ಯೋಜನೆಯಡಿಯಲ್ಲಿ ಕುಶಾಲನಗರದಲ್ಲಿ ಉದ್ಯೋಗ ಮೇಳ ನಡೆಯಿತು.

ಸ್ಥಳೀಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ಮೇಳವನ್ನು ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಉದ್ಯೋಗಾಸಕ್ತ ಯುವಕ, ಯುವತಿಯರು ಇಂತಹ ಮೇಳಗಳ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.

ಕೊರೊನಾ ಹಿನ್ನೆಲೆ ಅನೇಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಗದಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಮತ್ತೆ ಮೇಳವೊಂದನ್ನು ಹಮ್ಮಿಕೊಳ್ಳಲು ಚಿಂತಿಸುವುದಾಗಿ ತಿಳಿಸಿದ ರಂಜನ್, ಇದುವರೆಗೆ ೭ ಉದ್ಯೋಗ ಮೇಳಗಳನ್ನು ನಡೆಸಲಾಗಿದ್ದು ಅದರಲ್ಲಿ ೫ ಮೇಳಗಳನ್ನು ತನ್ನ ಸ್ವಂತ ಆಸಕ್ತಿಯಲ್ಲಿ ನಡೆಸಲಾಗಿತ್ತು. ಸ್ಥಳದಲ್ಲೇ ಉದ್ಯೋಗ ಪಡೆಯುವ ಅವಕಾಶ ಇದ್ದು ಇದರ ಪ್ರಯೋಜವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು. ಈ ಸಂದರ್ಭ ಮಾತನಾಡಿದ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಉಮಾ, ಉದ್ಯೋಗ ಮೇಳಕ್ಕೆ ಆನ್‌ಲೈನ್‌ನಲ್ಲಿ ಸಾವಿರಕ್ಕೂ ಅಧಿಕ ನೋಂದಣಿಯಾಗಿದ್ದು ಕುಶಾಲನಗರ ಮೇಳದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ೫೦೦ ರಷ್ಟು ಆಕಾಂಕ್ಷಿಗಳು ಹಾಜರಾಗಿದ್ದು ೨೩ ಸಂಸ್ಥೆಗಳು ಉದ್ಯೋಗ ಕಲ್ಪಿಸಲು ಮುಂದೆ ಬಂದಿದ್ದರು ಎಂದು ಮಾಹಿತಿ ನೀಡಿದರು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್, ಕಾಲೇಜು ಪ್ರಾಂಶುಪಾಲ ಕುಮಾರ್, ಕುಡಾ ಸದಸ್ಯ ವೈಶಾಖ್, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಮತ್ತಿತರರು ಇದ್ದರು.