ಸೋಮವಾರಪೇಟೆ, ಫೆ. ೧೦: ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನೈತಿಕ ಚಟುವಟಿಕೆ ಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕೆಂದು ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ತಾ. ೧೪ ರ ವ್ಯಾಲೆಂಟೈನ್ ಡೇ ದಿನದಂದು ಶಾಲಾ ಕಾಲೇಜು, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗಸ್ತು ನಡೆಸಬೇಕು. ಅನೈತಿಕ ಹಾಗೂ ಸ್ವೇಚ್ಚಾಚಾರದ ಆಚರಣೆಗಳಿಗೆ ಕಡಿವಾಣ ಹಾಕಬೇಕು ಎಂದು ಸಮಿತಿಯ ಮೂಲಕ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮೋಜು ಮಸ್ತಿಯ ನೆಪದಲ್ಲಿ ಯುವ ಜನಾಂಗವನ್ನು ದೂಮಪಾನ, ಮದ್ಯಪಾನ, ಡ್ರಗ್ಸ್ ಮಾಫಿಯಾಕ್ಕೆ ಸೆಳೆಯಲಾಗುತ್ತಿದೆ. ಇಂತಹ ಜಾಲಕ್ಕೆ ಯುವ ಜನಾಂಗ ಬಲಿಯಾಗದಂತೆ ಪೋಷಕರೂ ಸಹ ಎಚ್ಚರಿಕೆ ವಹಿಸಬೇಕು ಎಂದು ಸಮಿತಿಯ ಪ್ರಮುಖರಾದ ಈರಪ್ಪ ಹೇಳಿದರು. ಈ ಸಂದರ್ಭ ಪದಾಧಿಕಾರಿಗಳಾದ ಪ್ರೇಮ್‌ಕುಮಾರ್, ಪೂವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.