*ಕೊಡ್ಲಿಪೇಟೆ, ಫೆ. ೧೦: ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಬಾಕಿ ಉಳಿಸಿಕೊಂಡಿರುವ ಶಾಖೆಗಳÀ ಸಾಲಿನಲ್ಲಿ ಕೊಡ್ಲಿಪೇಟೆ ಪ್ರಥಮ ಸ್ಥಾನದಲ್ಲಿದ್ದು, ಎಲ್ಲರೂ ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಮೂಲಕ ಮುಂದಿನ ಸಮಸ್ಯೆಗಳಿಂದ ಪಾರಾಗಬೇಕು ಎಂದು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್ ಹೇಳಿದರು.

ಕೊಡ್ಲಿಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಶಾಖಾ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

. ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಟ್ಟಂತೆ ೫ ಶಾಖೆಗಳಿದ್ದು, ಇದರಲ್ಲಿ ಅತೀ ಹೆಚ್ಚು ವಿದ್ಯುತ್ ಶುಲ್ಕ ಪಾವತಿಗೆ ಬಾಕಿ ಉಳಿಸಿಕೊಂಡಿರುವ ಶಾಖೆಯಾಗಿ ಕೊಡ್ಲಿಪೇಟೆ ಗುರುತಿಸಿ ಕೊಂಡಿದೆ. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ೨೬ ಲಕ್ಷ, ಬ್ಯಾಡಗೊಟ್ಟ ಗ್ರಾ.ಪಂ. ೧೭ ಲಕ್ಷ, ಬೆಸೂರು ಗ್ರಾ.ಪಂ. ೬ ಲಕ್ಷ ಬಾಕಿ ಉಳಿಸಿಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದರೊಂದಿಗೆ ಸಾರ್ವಜನಿಕ ಗ್ರಾಹಕರು ಸರಿಯಾದ ಸಮಯಕ್ಕೆ ತಮ್ಮ ವಿದ್ಯುತ್ ಶುಲ್ಕ ಪಾವತಿಸಬೇಕು. ಬಾಕಿ ಉಳಿಯುವ ಶುಲ್ಕಕ್ಕೆ ಬಡ್ಡಿ ವಿಧಿಸುವದರಿಂದ ಹೆಚ್ಚಿನ ಆರ್ಥಿಕ ಹೊಡೆತ ಬೀಳುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕೆಂದು ಧನಂಜಯ್ ಕಿವಿಮಾತು ಹೇಳಿದರು.

ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ಸರಬರಾಜು ಘಟಕ ಸ್ಥಾಪನೆಗೆ ಯೋಜನೆ ಸಿದ್ಧಗೊಂಡಿದ್ದು, ಕಂದಾಯ ಇಲಾಖೆ ಯಿಂದ ಜಾಗ ಮಂಜೂರಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು. ವಿದ್ಯುತ್ ಸರಬರಾಜು ಘಟಕವನ್ನು ಮೇಲ್ದರ್ಜೆಗೇರಿಸಿ ಬೆಸೂರು ಭಾಗಕ್ಕೆ ನೂತನ ಫೀಡರ್ ಅಳವಡಿಸಲು ೩೬ ಲಕ್ಷ ರೂಪಾಯಿಗಳ ಯೋಜನೆಗೆ ಟೆಂಡರ್ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಸುರಕ್ಷಿತ ವಿದ್ಯುತ್ ಬಳಕೆಯಿಂದ ಅವಘಡಗಳನ್ನು ತಪ್ಪಿಸಬಹುದಾಗಿದೆ. ವಿದ್ಯುತ್ ಬಳಕೆಯ ಬಗ್ಗೆ ಪ್ರತಿಯೊಬ್ಬ ಗ್ರಾಹಕರು ಅರಿವು ಹೊಂದಬೇಕು. ಅನಗತ್ಯವಾಗಿ ವಿದ್ಯುತ್ ಪೋಲು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಲು ನಿಗಮದ ವತಿಯಿಂದ ಪ್ರತಿ ತಿಂಗಳ ಮೂರನೇ ಶನಿವಾರ ‘ಗ್ರಾಹಕ ಸಂವಹನ’ ಕಾರ್ಯಕ್ರಮ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ‘ಜನ ಸಂಪರ್ಕ ಸಭೆ’ ಆಯೋಜಿಸಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧನಂಜಯ್ ತಿಳಿಸಿದರು.

ಕೊಡ್ಲಿಪೇಟೆ ಶಾಖಾಧಿಕಾರಿ ಹಿರೇಮಠ್ ಅವರು ಇಲಾಖೆಯ ಯೋಜನೆಗಳ ಬಗ್ಗೆ ವಿವರ ನೀಡಿದರು. ಇಲಾಖೆಯ ಹಿರಿಯ ಸಹಾಯಕ ದೀಪಕ್, ಶನಿವಾರಸಂತೆ ಶಾಖಾಧಿಕಾರಿ ಹೇಮಂತ್‌ಕುಮಾರ್, ಸಿಬ್ಬಂದಿ ಪ್ರಕಾಶ್ ಉಪಸ್ಥಿತರಿದ್ದರು. ಸ್ಥಳೀಯರಾದ ಸುಬ್ರಮಣ್ಯ ಆಚಾರ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಮಹಮ್ಮದ್ ಹನೀಫ್ ಸೇರಿದಂತೆ ಇತರರು ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಸೂಕ್ತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿದ ಗ್ರಾಹಕರಾದ ಡಾ. ಉದಯ್‌ಕುಮಾರ್, ಬೆಸೂರು ಲೋಕೇಶ್, ಹ್ಯಾಂಡ್‌ಪೋಸ್ಟ್ನ ಸೋಮಶೇಖರ್, ದೊಡ್ಡಕೊಡ್ಲಿಯ ಸುಬ್ಬಯ್ಯ ಅವರುಗಳನ್ನು ಸನ್ಮಾನಿಸಲಾಯಿತು.