ವೀರಾಜಪೇಟೆ, ಫೆ. ೧೦: ವೀರಾಜಪೇಟೆಯ ಮೊಗರಗಲ್ಲಿಯ ಕಾಶೀಂಮುಲ್ ಉಲುಂ ಮದರಸದಿಂದ ಪಟ್ಟಣ ಪಂಚಾಯಿತಿಯ ನಾಲ್ಕು ವಾರ್ಡ್ಗಳಿಗೆ ನಲ್ಲಿ ನೀರು ಪೊರೈಕೆಗಾಗಿ ಹೊಸ ನೀರಿನ ಟ್ಯಾಂಕ್ನ್ನು ನಿರ್ಮಿಸಲು ಅಂದಾಜು ಆರು ಲಕ್ಷ ಮೌಲ್ಯದ ೨೨೫ ಅಡಿ ಜಾಗವನ್ನು ಮದರಸ ಉದಾರವಾಗಿ ನೀಡಿ ಸಹಕರಿಸಿದ್ದಾರೆ ಎಂದು ಇಲ್ಲಿನ ಏಳನೇ ವಾರ್ಡ್ನ ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಮನೆಯಪಂಡ ಕೆ. ದೇಚಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ವೀರಾಜಪೇಟೆ ಪ.ಪಂ.ಗೆ ಸೇರಿದ ಏಳು, ಐದು, ಎಂಟು ಹಾಗೂ ಒಂಭತ್ತನೇ ವಾರ್ಡ್ಗಳಿಗೆ ಬೇತ್ರಿಯ ಕಾವೇರಿ ಹೊಳೆಯ ಮೂಲಕ ನೀರು ಪೂರೈಸಲು ನೀರು ಶೇಖರಣಾ ಕೇಂದ್ರದ ನಿರ್ಮಾಣಕ್ಕೆ ಮೊಗರಗಲ್ಲಿಯಲ್ಲಿ ನಾಲ್ಕು ವರ್ಷಗಳಿಂದಲೂ ಜಾಗದ ಸಮಸ್ಯೆ ಇತ್ತು. ಇದರಿಂದ ನೀರು ಶೇಖರಣಾ ಕಟ್ಟಡ ಕಾಮಗಾರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಜಾಗ ದಾನದಿಂದಾಗಿ ಸಮಸ್ಯೆ ಬಗೆಹರಿದಿರುವುದರಿಂದ ಈಗ ನಾಲ್ಕು ವಾರ್ಡ್ಗಳನಲ್ಲಿ ನೀರು ಪೊರೈಕೆಗೆ ಸಹಕಾರಿಯಾಗಲಿದೆ. ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್.ಹೆಚ್. ಮತೀನ್ ಹಾಗೂ ಎಂ.ಕೆ. ದೇಚಮ್ಮ ಮೊಗರಗಲ್ಲಿಯ ಮದರಸ ಇ ಕಾಶೀಂಮುಲ್ ಉಲುಂನ ಆಡಳಿತ ಮಂಡಳಿಯೊAದಿಗೆ ಪಟ್ಟಣ ಪಂಚಾಯಿತಿಯ ಜಾಗದ ಸಮಸ್ಯೆ ಕುರಿತು ಚರ್ಚಿಸಿ ವಾರ್ಡ್ಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಗಮನಕ್ಕೆ ತಂದ ನಂತರ ಮದರಸ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎ. ನೂರ್ ಹುಸೇನ್ ಒಪ್ಪಿ ಜಾಗದ ಸರ್ವೇ ಮಾಡಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಬೇಕಾಗುವ ೨೨೫ ಅಡಿ ಜಾಗವನ್ನು ಗುರುತಿಸಿ ನಕಾಶೆ ಕೊಟ್ಟಿದ್ದಾರೆ. ಜಾಗದ ಉದಾರ ದಾನದ ಹಸ್ತಾಂತರ ಪತ್ರವನ್ನು ಪಟ್ಟಣ ಪಂಚಾಯಿತಿಗೆ ತಕ್ಷಣ ಮದರಸ ಆಡಳಿತ ಮಂಡಳಿಯಿAದ ಕೊಡುವುದಾಗಿ ಈ ಇಬ್ಬರು ಸದಸ್ಯರುಗಳಿಗೆ ಭರವಸೆ ನೀಡಿದ್ದಾರೆ.
ಮೊಗರಗಲ್ಲಿಯಲ್ಲಿ ನೀರು ಶೇಖರಣಾ ಕೇಂದ್ರದ ಜಾಗದ ಸಮಸ್ಯೆ ಬಗೆಹರಿದಿರುವುದರಿಂದ ಸುಮಾರು ರೂ. ೧೮.೫೦ ಲಕ್ಷ ವೆಚ್ಚದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಲೀಟರ್ಗಳ ಸಾಮರ್ಥ್ಯದ ನೀರಿನ ಟ್ಯಾಂಕ್ನ್ನು ನಿರ್ಮಿಸಲು ಟೆಂಡರ್ ಕರೆದು ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು. ೨೦೨೦-೨೧ನೇ ಸಾಲಿನ ಹಣಕಾಸು ಆಯೋಗದ ಸಾಮಾನ್ಯ ಮೂಲದ ಅನುದಾನದಲ್ಲಿ ಈ ಹಣವನ್ನು ಮೀಸಲಿರಿಸಲಾಗಿದ್ದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.
ಸಮೀಕ್ಷೆಯ ಪ್ರಕಾರ ಈ ನೀರು ಶೇಖರಣಾ ಕೇಂದ್ರದ ಕಾಮಗಾರಿ ಪೂರ್ಣಗೊಂಡರೆ ನಾಲ್ಕು ವಾರ್ಡ್ಗಳ ಸುಮಾರು ೧೦೦೦ ದಿಂದ ೧೨೦೦ ರ ವರೆಗಿನ ಕುಟುಂಬಗಳು ಬೇತ್ರಿ ಕಾವೇರಿ ಹೊಳೆಯ ಮೂಲಕ ನೀರಿನ ಸೌಲಭ್ಯ ಪಡೆಯಲಿದ್ದಾರೆ. ಈ ಯೋಜನೆಯಿಂದ ಕಾವೇರಿ ನೀರಿನ ಸೌಲಭ್ಯದಿಂದ ವಂಚಿತರಾದ ವಾರ್ಡ್ಗಳಿಗೆ ಈ ಕಾವೇರಿ ಹೊಳೆಯ ನಲ್ಲಿ ನೀರಿನ ಸೌಲಭ್ಯ ದೊರೆಯಲಿದೆ ಎಂದು ಎಸ್.ಹೆಚ್. ಮತೀನ್ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಗೆ ನೀರು ಶೇಖರಣಾ ಕೇಂದ್ರದ ಜಾಗವನ್ನು ಗುರುತಿಸುವ ಸಂದರ್ಭದಲ್ಲಿ ಮದರಸದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎ. ನೂರ್ ಹುಸೇನ್, ಮುಕ್ತಾರ್ ಹುಸೇನ್, ಅಸ್ಗರ್ ಹುಸೇನ್, ಬಶೀರ್ ಮೌಲಾನ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಂ.ಕೆ. ದೇಚಮ್ಮ, ಎಸ್.ಹೆಚ್. ಮತೀನ್ ಮತ್ತಿತರರು ಹಾಜರಿದ್ದರು.