ಸಿದ್ದಾಪುರ, ಫೆ. ೯: ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾ.ಪಂ. ಆಗಿರುವ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾ.ಪಂ. ಹಾಗೂ ಅಧಿಕ ವರಮಾನ ಇರುವಂತಹ ಸಿದ್ದಾಪುರ ಗ್ರಾ.ಪಂ. ಎಂಬ ಖ್ಯಾತಿ ಪಡೆದಿರುವ ಸಿದ್ದಾಪುರ ಗ್ರಾ.ಪಂ. ಚುನಾವಣೆಯಲ್ಲಿ ೨೫ ಸ್ಥಾನಗಳ ಪೈಕಿ ಈ ಬಾರಿ ಬಿಜೆಪಿ ಬೆಂಬಲಿತ ಸದಸ್ಯರು ೧೫ ಸ್ಥಾನಗಳನ್ನು ಪಡೆಯುವ ಮೂಲಕ ಪ್ರಚಂಡ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಳೆದ ಬಾರಿ ೧ ಸ್ಥಾನವನ್ನೂ ಪಡೆಯದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಈ ಬಾರಿ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಠಿಸಿದ್ದಾರೆ. ಈಗಾಗಲೇ ಸರ್ಕಾರವು ಆಯಾ ಗ್ರಾ.ಪಂ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ವರ್ಗ ಪಂಚಾಯಿತಿ ವಾರು ಮೀಸಲಾತಿಗಳನ್ನು ಪ್ರಕಟಿಸಿದೆ. ಆದರೆ ಗ್ರಾ.ಪಂ.ವಾರು ಮೀಸಲಾತಿಗಳನ್ನು ಪ್ರಕಟಿಸದಿದ್ದರೂ ಕೂಡ ಆಯ್ಕೆ ಯಾಗಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಮ್ಮದೇ ಶೈಲಿಯಲ್ಲಿ ಅಧ್ಯಕ್ಷರ ಸ್ಥಾನದ ಬಗ್ಗೆ ಕಣ್ಣಿಟ್ಟಿದ್ದಾರೆ. ಅಲ್ಲದೇ ಪಕ್ಷದ ಮುಖಂಡರ ಮುಖಾಂತರ ಒತ್ತಡವನ್ನು ಕೂಡ ತರುತ್ತಿದ್ದಾರೆ ಎನ್ನ ಲಾಗಿದೆ. ರಾಜಕೀಯ ರಹಿತವಾಗಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ೧೫ ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಎಲ್ಲಾ ಮೀಸಲಾತಿಗಳಲ್ಲಿ ವಿಜೇತರನ್ನು ಹೊಂದಿರುವAತಹ ತಂಡವಾಗಿದೆ. ಈ ಹಿನ್ನೆಲೆ ಅಧ್ಯಕ್ಷ ಸ್ಥಾನವು ಬಿಜೆಪಿ ಬೆಂಬಲಿತ ಪಕ್ಷಕ್ಕೆ ಯಾವುದೇ ಪೈಪೋಟಿ ಇಲ್ಲದೇ ಸಿಗುವುದು ಖಚಿತವಾಗಿದೆ. ಆದರೆ ಈಗಾಗಲೇ ಅಧ್ಯಕ್ಷರ ಸ್ಥಾನಕ್ಕಾಗಿ ಸಾಮಾನ್ಯ ಮಹಿಳಾ ಮೀಸಲಾತಿ ಪ್ರಕಟವಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ. ಅಲ್ಲದೇ ಉಪಾಧ್ಯಕ್ಷರ ಸ್ಥಾನ ಬಿಸಿಎಂ (ಎ) (ಹಿಂದುಳಿದ ವರ್ಗ ಪುರುಷ) ಎಂದು ಪ್ರಕಟವಾಗಿದ್ದು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದು ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಮಹಿಳಾ ಸದಸ್ಯರು ಕೂಡ ಅಧ್ಯಕ್ಷರ ಸ್ಥಾನಕ್ಕಾಗಿ ಪಕ್ಷದ ಮುಖಂಡರ ಬಳಿ ಚರ್ಚಿಸು ತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಸೇರಿ ಅಂತಿಮವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
- ವಾಸು ಎ.ಎನ್.