ಮಡಿಕೇರಿ, ಫೆ. ೯: ಕೊಡವ ಮಕ್ಕಡ ಕೂಟದ ವತಿಯಿಂದ ಇಂದು ಎರಡು ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು. ಕನ್ನಡ ಮತ್ತು ಕೊಡವ ಭಾಷೆಯ ಒಟ್ಟು ೧೭ ಪುಸ್ತಕಗಳನ್ನು ಬರೆದಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ ೧೮ನೇ ಪುಸ್ತಕ ನಾಡ ಪೆದ ಆಶಾ ಹಾಗೂ ನಾಲ್ಕು ಪುಸ್ತಕಗಳನ್ನು ಬರೆದಿರುವ ಸಾಹಿತಿ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ೫ನೇ ಪುಸ್ತಕ ಬೈಸಿಕಲ್ ಲೋಕಾರ್ಪಣೆಗೊಂಡಿತು.

ನಗರÀದ ಪತ್ರಿಕಾ ಭವನದಲ್ಲಿ ನಡೆದ ಪುಸ್ತಕಗಳ ಲೋಕಾರ್ಪಣೆಯ ಸರಳ ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ ಮನುಷ್ಯನ ಜೀವನ ತನ್ನ ಸ್ವಂತಕ್ಕಷ್ಟೇ ಸೀಮಿತವಾಗಬಾರದು, ಬದಲಿಗೆ ಸಮಾಜಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕಾಗುತ್ತದೆ. ಈ ಎಳೆಯನ್ನು ಆಧರಿಸಿ ನಾಡ ಪೆದ ಆಶಾ ಕಾದಂಬರಿಯನ್ನು ರಚಿಸಲಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆ ಯಾಗಿ ಕಾರ್ಯನಿರ್ವಹಿಸುವ ರೈತ ಕುಟುಂಬದ ಹೆಣ್ಣೊಬ್ಬಳ ಸಾಮಾಜಿಕ ಜೀವನದ ಮೇಲೆ ಕಾದಂಬರಿ ಬೆಳಕು ಚೆಲ್ಲಿದೆ. ಯೋಧನ ಪತ್ನಿ, ರೈತ ಮಹಿಳೆ ತನ್ನ ಬದುಕಿನಲ್ಲಿ ಅನುಭವಿಸುವ ಸಾಮಾಜಿಕ ಸಂಕಷ್ಟಗಳು ಮತ್ತು ಆಕೆ ಈ ಸಮಾಜಕ್ಕಾಗಿ ತನ್ನದೇ ಆದ ಕೊಡುಗೆಗಳನ್ನು ನೀಡುವ ಕಥಾ ಹಂದರವಿದೆ. ಕಥಾ ನಾಯಕಿಯಾಗಿ ರುವ ಕಾವೇರಿ ಪಾತ್ರಧಾರಿ ತನ್ನ ನಿಸ್ವಾರ್ಥ ಸೇವೆಯ ಮೂಲಕವೇ ಸಮಾಜದ ಗಮನ ಸೆಳೆದು ಆಶಾ ಎಂದು ಹೆಸರು ಗಳಿಸುತ್ತಾಳೆ. ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಕೊಡಗಿನ ಸಾಂಸ್ಕೃತಿಕ ಚಿತ್ರಣ ದೊಂದಿಗೆ ರಚಿಸಲಾಗಿದೆ ಎಂದು ನಾಗೇಶ್ ಕಾಲೂರು ತಿಳಿಸಿದರು.

ಚಿತ್ರ ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಮ್ಮ ಬೈಸಿಕಲ್ ಪುಸ್ತಕದ ಕುರಿತು ಮಾತನಾಡಿ ತಂದೆಯನ್ನು ಕಳೆದುಕೊಂಡ ಬಡ ಕುಟುಂಬದ ಮಕ್ಕಳ ಜೀವನವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದರು.

ಚಿಂದಿ ಆಯುವ ಬೀದಿ ಬದಿಯ ಮಕ್ಕಳು ಬೈಸಿಕಲ್ ಖರೀದಿಗಾಗಿ ಹಣ ಸಂಗ್ರಹಿಸಲು ಪಡುವ ಕಷ್ಟಗಳನ್ನು ಮತ್ತು ಜೀವನದ ಮೌಲ್ಯಗಳನ್ನು ಕಥೆಯಲ್ಲಿ ವಿವರಿಸಲಾಗಿದೆ ಎಂದರು.

ನಾಟಕ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾನು ಇದೀಗ ಸಾಹಿತ್ಯದೆಡೆಗೂ ಒಲವು ತೋರಿರುವುದಾಗಿ ತಿಳಿಸಿದರು.

ಬೈಸಿಕಲ್ ಪುಸ್ತಕ ಅನಾವರಣ ಗೊಳಿಸಿ ಮಾತನಾಡಿದ ಸಮಾಜ ಸೇವಕ ಹಾಗೂ ಡೆಫೋಡೈಲ್ಸ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮಾಲೀಕ ಐಚೆಟ್ಟೀರ ಚಿಣ್ಣಪ್ಪ ಸಾಹಿತಿ ಗಳಿಗೆ ಪ್ರೋತ್ಸಾಹದ ಅಗತ್ಯವಿದೆ. ಒಟ್ಟು ೪೮ ಪುಸ್ತಕಗಳನ್ನು ಹೊರ ತಂದು ದೊಡ್ಡ ಸಾಧನೆ ಮಾಡಿರುವ ಕೊಡವ ಮಕ್ಕಡ ಕೂಟಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೂಟದ ವತಿಯಿಂದ ೪೭ನೇ ಪುಸ್ತಕವಾಗಿ ನಾಡ ಪೆದ ಆಶಾ ಹಾಗೂ ೪೮ನೇ ಪುಸ್ತಕವಾಗಿ ಬೈಸಿಕಲ್ ಲೋಕಾರ್ಪಣೆಗೊಂಡಿದೆ ಎಂದರು. ಎಲೆ ಮರೆಯ ಕಾಯಿಯಂತಿರುವ ಸಾಹಿತ್ಯ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯವನ್ನು ಕೂಟ ಮಾಡಿದೆ. ಸೇನೆ, ಕ್ರೀಡೆ, ಸಾಹಿತ್ಯ ಮತ್ತಿತರ ಕ್ಷೇತ್ರಗಳ ಸಾಧಕರ ಕುರಿತು ಪುಸ್ತಕಗಳು ಹೊರ ಬಂದಿದ್ದು, ಹಲವು ಪುಸ್ತಕಗಳಿಗೆ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಕೂಡ ಲಭಿಸಿದೆ.

ವಿವಿಧ ಗ್ರಂಥಾಲಯಗಳಲ್ಲೂ ಪುಸ್ತಕಗಳು ಲಭ್ಯವಿದ್ದು, ಪುಸ್ತಕಗಳಲ್ಲಿನ ಮಾಹಿತಿಯಿಂದ ಶೈಕ್ಷಣಿಕ ಕ್ಷೇತ್ರದ ಹಲವರಿಗೆ ಸಹಾಯವಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕ ನಂದಿನೆರವAಡ ಪ್ರವೀಣ್ ಪಳಂಗಪ್ಪ ಅವರು ನಾಡ ಪೆದ ಆಶಾ ಪುಸ್ತಕವನ್ನು ಲೋಕಾ ರ್ಪಣೆಗೊಳಿಸಿದರು. ಪಾಡೆಯಂಡ ದೀಪಕ್ ದೇವಯ್ಯ ಉಪಸ್ಥಿತರಿದ್ದರು.