ಮಡಿಕೇರಿ, ಫೆ. ೯: ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಕೇರಳ ಸರ್ಕಾರದ ಮಾದರಿಯಲ್ಲಿ ಕಾಫಿ ಬೆಳೆಗೆ ಬೆಂಬಲ ಬೆಲೆ ಘೋಷಣೆ, ಅಕಾಲಿಕ ಮಳೆಯಿಂದ ನಲುಗಿರುವ ಕೊಡಗಿನ ಸಣ್ಣ, ಮಧ್ಯಮ ಬೆಳೆಗಾರರ ಬೆಳೆ ಸಂಬAಧಿತ ಸಾಲ ಪೂರ್ಣ ಮನ್ನಾ ಮತ್ತು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು,
ಸಂಚಾಲಕ ಡಾ.ಈ.ರಾ.ದುರ್ಗಾಪ್ರಸಾದ್ ಮಾತನಾಡಿ, ಅಕಾಲಿಕ ಮಳೆಯಿಂದಾಗಿ ಭತ್ತ, ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಬೆಳೆಗಳಿಗೂ ಹಾನಿಯಾಗಿ ನಷ್ಟ ಸಂಭವಿಸಿದೆ. ಭತ್ತಕ್ಕೆ ಸರಕಾರ ಬೆಂಬಲ ಬೆಲೆ ಘೋಷಿಸಬೇಕು. ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು ರೈತರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಕೇರಳ ಸರಕಾರ ಕಾಫಿ ಬೆಳೆಗೆ ಘೋಷಿಸಿದ ಮಾದರಿಯಲ್ಲೇ ಕರ್ನಾಟಕ ಸರ್ಕಾರ ಕೂಡ ಬೆಂಬಲ ಬೆಲೆ ಘೋಷಿಸಬೇಕು, ಕಾಫಿ ಮಂಡಳಿಯನ್ನು ಉಪಕಚೇರಿಗಳನ್ನು ಮುಚ್ಚದೆ ಬಲಪಡಿಸಬೇಕು ಎಂದು ಒತ್ತಾಯಿಸಿದ ಅವರು, ಸಣ್ಣ ಬೆಳೆಗಾರರ ಜೀವನ ಭದ್ರತೆಗೆ ಸರ್ಕಾರ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಚಾಮಿಯಾಲಿನ ಕೆ.ಹೆಚ್. ಹನೀಫ, ಕೆ.ಎ. ಹಂಸ, ಗುಂಡಿಕೆರೆ ಸಿ.ಎ. ಹಮೀದ್, ಹೆಗ್ಗಳದ ಬಾಪುಟ್ಟಿ, ವೀರಾಜಪೇಟೆಯ ನೌಶೀರ್ ಮೊದಲಾದವರು ಭಾಗವಹಿಸಿದ್ದರು.