ಕಣಿವೆ, ಫೆ. ೯: ಸಮೃದ್ಧತೆಯಿಂದ ಕೂಡಿದ ಅರಣ್ಯದ ಇರುವಿಕೆಗೆ ಕಾರಣರಾಗಿರುವ ಆದಿವಾಸಿಗಳನ್ನು ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ರಾಯ್ ಡೇವಿಡ್ ಅಸಮಾಧಾನ ವ್ಯಕ್ತಪಡಿಸಿದರು.

ಯಡವನಾಡು ಗಿರಿಜನ ಹಾಡಿಯ ಸಮುದಾಯ ಭವನದಲ್ಲಿ ಆದಿವಾಸಿಗಳ ಹಕ್ಕುಗಳ ಕುರಿತಂತೆ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಐಷಾರಾಮಿ ಜೀವನ ನಡೆಸುತ್ತಿರುವ ಟಿಬೇಟನ್ನರಿಗೆ ಸಾವಿರಾರು ಎಕರೆಗಳಷ್ಟು ಕಾಡು ಕಡಿದು ಆಶ್ರಯ ಕಲ್ಪಿಸಿರುವ ಸರ್ಕಾರಗಳು, ಅರಣ್ಯಗಳ ಇರುವಿಕೆಗೆ ಕಾರಣರಾಗಿರುವ ಆದಿವಾಸಿಗಳಿಗೆ ಕನಿಷ್ಟ ಸೂರು ಕಲ್ಪಿಸಲು ಹಾಗೂ ಜೀವನಕ್ಕೆ ಕೃಷಿ ಮಾಡಲು ಇದುವರೆಗೂ ಅಗತ್ಯ ಭೂಮಿ ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಡೇವಿಡ್ ಆಕ್ರೋಶÀ ವ್ಯಕ್ತಪಡಿಸಿದರು.

ಪಾರಂಪರಿಕ ಅರಣ್ಯವಾಸಿಗಳಾದ ಗಿರಿಜನರಿಗೆ ಸರ್ಕಾರಗಳು ಅಗತ್ಯವಾಗಿ ಕೊಡಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲಿನ ಜನರ ಜೀವನೋಪಾಯಕ್ಕೆ ಅಗತ್ಯವಿರುವ ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಣೆಗೆ ಯಾವುದೇ ಗಡಿ ಗುರುತಿನ ಅಗತ್ಯ ಕೂಡದು. ಅರಣ್ಯದೊಳಗಿನ ಮೂಲ ನಿವಾಸಿಗಳಾದ ಆದಿವಾಸಿಗಳ ಅಭಿಪ್ರಾಯಗಳನ್ನು ಅಧಿಕಾರಿಗಳು ಗೌರವಿಸಿ ಕಾರ್ಯರೂಪಕ್ಕೆ ತರಬೇಕೇ ವಿನಃ, ಅಧಿಕಾರಿಗಳು ಹೇಳಿದ್ದೇ ಕಾನೂನು ಆಗಬಾರದು ಎಂದು ರಾಯ್ ಡೇವಿಡ್ ಹೇಳಿದರು.

ಮತ್ತೋರ್ವ ಅತಿಥಿ ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಮಾತನಾಡಿ, ಮೂಲಸೌಕರ್ಯಗಳು ಸಿಗದೇ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದ ಆದಿವಾಸಿಗಳಿಗೆ ಸರ್ಕಾರಗಳು ಒಂದಷ್ಟು ಸೌಲಭ್ಯವನ್ನು ನೀಡಿದ್ದೇ ಆಗಿದ್ದರೆ ಅದು, ರಾಯ್ ಡೇವಿಡ್, ಜೆ.ಪಿ. ರಾಜು ಅವರಂತಹ ಹೋರಾಟಗಾರರಿಂದ ಮಾತ್ರ ಸಾಧ್ಯ. ಗಿರಿಜನರು ಸಂಘಟಿತರಾಗದ ಹೊರತು ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ಚಂದ್ರು ಹೇಳಿದರು.

ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಮ ಸಭೆ ತೀರ್ಮಾನಿಸಿದ ಕಾಡಿನಲ್ಲಿ ಹಾಗೂ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ಚಂದ್ರು ಹೇಳಿದರು. ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ, ಐಗೂರು ಗ್ರಾಮ ಪಂಚಾಯಿತಿ ಪಿಡಿಓ ಯಾದವ್, ಅರಣ್ಯ ಇಲಾಖೆಯ ಸಿಬ್ಬಂದಿ ಮನು, ಗಿರಿಜನ ಹಾಡಿಯ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವಿ ಇದ್ದರು.