ನಾಪೋಕ್ಲು, ಫೆ. ೮: ಕುಂಜಿಲ ಪರಂಬು ಬಾಣೆಯಿಂದ ಪಯ್ಯನರಿ ದರ್ಗಾದ ಮೂಲಕ ಕಕ್ಕಬ್ಬೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಈ ವ್ಯಾಪ್ತಿಯ ಗ್ರಾಮಸ್ಥರು ಕಕ್ಕಬ್ಬೆ ಪಟ್ಟಣದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.

ಗುತ್ತಿಗೆದಾರರು ಮತ್ತು ಇಂಜಿನಿಯರ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟುಹಿಡಿದರು.

ಪ್ರತಿಭಟನಾಕಾರರ ಮನವೊಲಿಸಿದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್.ಕಿರಣ್ ಮತ್ತು ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ನಾವು ಗುತ್ತಿಗೆದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದೇವೆ. ಅವರು ಹೊರ ಜಿಲ್ಲೆಯಲ್ಲಿದ್ದಾರೆ. ಕೂಡಲೇ ಕಾಮಗಾರಿ ಆರಂಭಿಸುವದಾಗಿ ತಿಳಿಸಿದ್ದಾರೆ. ಆದ್ದರಿಂದ ಪ್ರತಿಭಟನೆ ಹಿಂಪಡೆಯಬೇಕು ಎಂದು ಹೇಳಿದರು.

ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ತಾ. ೧೪ರ ಒಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ೧೫ರ ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಂತರ ಪಂಚಾಯಿತಿ ಅಭಿವೃದ್ಧಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ

ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಕೆ.ಹಂಸ, ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ ಮುಂದುವರೆಸುವದಾಗಿ ಎಚ್ಚರಿಸಿದರು. ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ ಚುನಾಯಿತ ಜನ ಪ್ರತಿನಿಧಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಕಲಿಯಂಡ ಸಂಪನ್ ಅಯ್ಯಪ್ಪ, ಪಯ್ಯನರಿ ಜಮಾಅತ್ ಮಾಜಿ ಅಧ್ಯಕ್ಷ ಎಂ.ಎ.ನಾಸಿರ್ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ.ರಜಾಕ್, ಅಶ್ರಫ್.ವಿ.ಹೆಚ್, ಅಶ್ರಫ್.ಕೆ.ಎಂ, ಕೆ.ಎ.ಮಜೀದ್, ಕೆ.ಎಂ.ಇಲಿಯಾಸ್, ಅದಪೊಳೆ ಮಹಮ್ಮದ್ ಹಾಜಿ, ಪಯ್ಯಡಿ ಮೂಸ, ಬಾಚಮಂಡ ಲವ ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಕೆ.ಎ.ಇಬ್ರಾಹಿ, ಗ್ರಾಮಸ್ಥರು ಇದ್ದರು.