ಮಡಿಕೇರಿ, ಫೆ. ೮: ಕೊಡಗು ಜಿಲ್ಲೆಯಲ್ಲಿ ಕಾಡುಮೇಡುಗಳು ಹೆಚ್ಚಿದ್ದು, ಪ್ರತೀ ಬಾರಿ ಬೇಸಿಗೆ ಸಂದರ್ಭದಲ್ಲಿ ಅಗ್ನಿ ಅನಾಹುತಗಳು ಅಲ್ಲಲ್ಲಿ ಸಂಭವಿಸುತ್ತಲೇ ಇರುತ್ತವೆ. ಪ್ರಸ್ತುತ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಂಕಿಯ ಸಣ್ಣ ಕಿಡಿ ಕಾಡಿಗೆ ಬಿದ್ದರೂ ಹೊತ್ತಿಕೊಂಡು ಭಾರೀ ಪ್ರಮಾಣದಲ್ಲಿ ಕಾಡುಗಳು ಅಗ್ನಿಗಾಹುತಿಯಾಗುವುದರ ಜೊತೆಗೆ ಕೆಲವೊಮ್ಮೆ ಮಾನವ - ಪ್ರಾಣಿ, ಪಕ್ಷಿಗಳ ಜೀವಕ್ಕೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಲ್ಲೂ ಕೂಡ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಹೋಂ ಸ್ಟೇ, ಹೊಟೇಲ್, ರೆಸಾರ್ಟ್ ಮಾಲೀಕರುಗಳು ಮಾಡಬೇಕಿದೆ. (ಮೊದಲ ಪುಟದಿಂದ) ಇಲ್ಲವಾದರೆ ನಮ್ಮ ನಿರ್ಲಕ್ಷö್ಯದಿಂದಾಗಿ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಇಂತಹದೇ ಒಂದು ಘಟನೆ ಇಂದು ನಡೆದಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿನ ಕಾಡಿನಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿತು. ಬೆಂಕಿಯು ತನ್ನ ಕೆನ್ನಾಲಿಗೆಯನ್ನುಚಾಚುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹರಸಾಹಸಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿ ಪಿ.ಚಂದನ್ ಅವರು, ಒಣಹುಲ್ಲು ಹೆಚ್ಚಾಗಿದ್ದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಡಿಗೇಡಿಗಳು ಧೂಮಪಾನ ಮಾಡಿ ಎಸೆದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆಯಿದ್ದು, ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದರು.