ಮಡಿಕೇರಿ, ಫೆ. ೮ : ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ೪೫ ಕಾಫಿ ಚೀಲಗಳನ್ನು ಕಳವು ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್ಟೇಟ್ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಧರ್ಮಪ್ಪ (೩೯), ಅದೇ ಎಸ್ಟೇಟ್ನಲ್ಲಿ ಚಾಲಕ ನಾಗಿದ್ದ ರಮೇಶ್ (೩೧) ಬಂಧಿತ ಆರೋಪಿಗಳು. ಆರೋಪಿತ ರಿಂದ ಕಳವು ಮಾಡಿದ್ದ ರೂ ೪.೫೦ ಲಕ್ಷ ಮೌಲ್ಯದ ಕಾಫಿಯನ್ನು ಮತ್ತು ಕೃತ್ಯಕ್ಕೆ ಬಳಸಿದ ಟ್ರಾಕ್ಟರ್ ಅನ್ನು ವಶಪಡಿಸಿ ಕೊಂಡು ಆರೋಪಿಗಳನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿದೆ.
ತಾ.೭ ರಂದು ಸುಂಟಿಕೊಪ್ಪ ಟಿ.ಸಿ.ಎಲ್ ಎಸ್ಟೇಟ್ನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಪಾರ್ಚ್ಮೆಂಟ್ ಕಾಫಿ ಬೀಜಗಳಿದ್ದ ೪೫ ಚೀಲಗಳನ್ನು ಕಳ್ಳರು ಕಳ್ಳತನ ಮಾಡಿರುವುದಾಗಿ ಎಸ್ಟೇಟ್ ವ್ಯವಸ್ಥಾಪಕರು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಬಳಿಕ ತನಿಖಾ ತಂಡ ಮೂಲಕ ಕಳ್ಳರ ಸೆರೆಗೆ ಪೊಲೀಸರು ಬಲೆ ಬೀಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ್ರಾ, ಕುಶಾಲನಗರ ಡಿ.ವೈ.ಎಸ್.ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಸಿಪಿಐ ಮಹೇಶ್ ಎಂ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ ವೆಂಕಟರಮಣ, ಪಿ.ಎಸ್.ಐ ಪುನೀತ್, ಸಿಬ್ಬಂದಿಗಳಾದ ಸತೀಶ್, ಜಗದೀಶ್, ಉದಯಕುಮಾರ್, ಪುನೀತ್ ಇದ್ದರು.