ಮಡಿಕೇರಿ, ಫೆ. ೬: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವರ್ತಿಕಾ ಕಟಿಯಾರ್ ಅವರು ವರದಕ್ಷಿಣೆ ಕಿರುಕುಳದ ಆರೋಪದಡಿ ತಮ್ಮ ಪತಿ, ಅತ್ತೆ ಹಾಗೂ ಪತಿಯ ಸಹೋದರ ಹಾಗೂ ಅವರ ಕುಟುಂಬದವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
೨೦೦೯ನೇ ಇಸವಿಯ ಐಎಫ್‌ಎಸ್ ಅಧಿಕಾರಿಯಾಗಿರುವ ನಿತಿನ್ ಯೆಹೊಲಾ ಅವರನ್ನು ೨೦೧೧ರಲ್ಲಿ ವಿವಾಹವಾಗಿದ್ದ ವರ್ತಿಕಾ ಕಟಿಯಾರ್ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪತಿ, ಅವರ ತಾಯಿ ಹಾಗೂ ಸಹೋದರ ಸೇರಿದಂತೆ ಅವರ ಕುಟುಂಬಸ್ಥರು ತನಗೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ ನಿತಿನ್ ಹಾಗೂ ಕುಟುಂಬಸ್ಥರು ಚಿನ್ನಾಭರಣ ವನ್ನು ಪಡೆದುಕೊಂಡಿದ್ದರು. ಆ ಬಳಿಕವೂ ಹಣಕ್ಕಾಗಿ ಪೀಡಿಸುತ್ತಿದ್ದರು. ಅಲ್ಲದೆ, ಹಣ ನೀಡದೆ ಇದ್ದರೆ ಸಂಬAಧವನ್ನು ಮುರಿದು ಕೊಳ್ಳುವುದಾಗಿ ಬೆದರಿಸುತ್ತಿದ್ದರು. ಅದಕ್ಕೆ ಹೆದರಿ ತಾನು ಹಲವು ಬಾರಿ ಹಣ ನೀಡಿದ್ದೆ. ಇಷ್ಟೇ ಅಲ್ಲದೆ ೨೦೧೨ರಲ್ಲಿ ನನ್ನ ಅಜ್ಜಿಯ ಬಳಿ ನಿತಿನ್ ೫ ಲಕ್ಷ ರೂ. ಮೊತ್ತದ ಚೆಕ್ ಪಡೆದುಕೊಂಡಿದ್ದರು. ಅತಿಯಾಗಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದ ಪತಿಗೆ ಅದನ್ನು ಬಿಡುವಂತೆ ತಿಳಿಸಿದರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು.
೨೦೧೬ರಲ್ಲಿ ಕೊಲಂಬೋಗೆ ತೆರಳಿದ್ದ ವೇಳೆ ನಿತಿನ್ ಹಲ್ಲೆ ನಡೆಸಿದ್ದ ಪರಿಣಾಮ ಕೈ ಮುರಿದಿತ್ತು. ೨೦೧೮ರ ದೀಪಾವಳಿ ಹಬ್ಬಕ್ಕೆ ಉಡುಗೊರೆಗಳನ್ನು ಕಳುಹಿಸಲಿಲ್ಲ ಎಂದು ಪತಿಯ ಕುಟುಂಬಸ್ಥರು ಜಗಳವಾಡಿ ವಿಚ್ಚೇದನ ಕೊಡಿಸುವುದಾಗಿ ಬೆದರಿಸಿದ್ದರು. ಅಲ್ಲದೆ, ಪತಿ ಹಾಗೂ ಅವರ ಮನೆಯವರು ಮನೆ ಖರೀದಿಸಲೆಂದು ೩೫ ಲಕ್ಷ ರೂ. ನೀಡುವಂತೆ ಹಲವಾರು ಬಾರಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ತಮ್ಮ ದೂರಿನಲ್ಲಿ ಪ್ರಸ್ತಾಪಿಸಿದ್ದು, ಅದರಂತೆ ಪತಿ ಸೇರಿ ಏಳು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ, ಜೀವಬೆದರಿಕೆ, ವಂಚನೆ ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ನಿತಿನ್ ಕೊಲಂಬೋ ಸೇರಿದಂತೆ ವಿವಿಧ ದೇಶಗಳ ರಾಯಭಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ವರ್ತಿಕಾ ಕಟಿಯಾರ್ ಪ್ರಸ್ತುತ ಬೆಂಗಳೂರಿನ ಕೆಎಸ್‌ಆರ್‌ಪಿ ಸಂಶೋಧನಾ ಹಾಗೂ ತರಬೇತಿ ಕೇಂದ್ರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.