ನಾಪೋಕ್ಲು, ಫೆ. ೫: ನಾಪೋಕ್ಲು ಪಟ್ಟಣ ಸಮೀಪದ ಕೊಡವ ಸಮಾಜ. ಚೋನಕೆರೆ ಸುತ್ತಮುತ್ತ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಜನ ಭಯಭೀತರಾಗಿದ್ದಾರೆ. ಗ್ರಾಮದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಎನ್.ಎಸ್. ಉದಯಶಂಕರ್, ಮಹಮ್ಮದ್ ಆಲಿ. ಅರೆಯಡ ಪೆಮ್ಮಯ್ಯ ಸೇರದಂತೆ ಹಲವರ ಕಾಫಿ ತೋಟಗಳಲ್ಲಿ ಒಂದು ಮರಿ ಸೇರಿದಂತೆ ಐದು ಕಾಡಾನೆಗಳ ಹಿಂಡು ಸಂಚರಿಸುತ್ತಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು `ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗಳು ಕಾಫಿ, ಬಾಳೆ, ತೆಂಗು, ಅಡಿಕೆ ಬೆಳೆಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಈಗ ಎಲ್ಲಾ ಕಾಫಿ ತೋಟಗಳಲ್ಲಿ ಕಾರ್ಮಿಕರು ಕಾಫಿ ಹಣ್ಣು ಕೀಳುವ ಕೆಲಸದಲ್ಲಿ ನಿರತರಾಗಿದ್ದು ಕಾಡಾನೆಗಳಿಂದ ಅಪಾಯ ಸಂಭವಿಸುವ ಭೀತಿ ಎದುರಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ ಕಾಡಾನೆಗಳ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದಾರೆ. ಆದರೆ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.