ಆಲೂರು-ಸಿದ್ದಾಪುರ, ಫೆ. ೫: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗೋಣಿಮರೂರು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ತಾ. ೮ ರಂದು ಗೋಣಿಮರೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ‘ಸುಗ್ಗಿ ಹುಗ್ಗಿ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆ ಕುರಿತು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಟಿ.ಡಿ. ಅನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.

ಸುಗ್ಗಿ ಹುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮ ಕುರಿತು ಶಾಲಾ ಸಹ ಶಿಕ್ಷಕಿ ಎ.ಎಚ್.ಸುಜಾತ ಮಾಹಿತಿ ನೀಡಿ-ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಹುಗ್ಗಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದ ಯಶಸ್ವಿಗೆ ಗೋಣಿಮರೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಸಹಕಾರ ಪ್ರೋತ್ಸಾಹ ಬಹಳ ಮುಖ್ಯವಾಗಿರುವ ನಿಟ್ಟಿನಲ್ಲಿ ಗ್ರಾಮದ ಸಹಕಾರ ನೀಡುವಂತೆ ಮನವಿ ಮಾಡಿದರು.

‘ಸುಗ್ಗಿ ಹುಗಿ’್ಗ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಸಾಂಸ್ಕೃತಿಕ ಕಲಾವಿದರು ಸೇರಿದಂತೆ ಜಿಲ್ಲೆಯ ಎಲ್ಲಾ ವಿವಿಧ ಕಡೆಗಳಿಂದ ಹೆಚ್ಚಿನ ಜನರು ಪಾಲ್ಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವಚ್ಛತ್ತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.

ತಾ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಸುಗ್ಗಿ ಹುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮ ಗ್ರಾಮದ ಮುಖ್ಯ ಬೀದಿಗಳಲ್ಲಿ ಜಾನಪದ ಸಂಸ್ಕೃತಿ ಹಿನ್ನೆಲೆಯುಳ್ಳ ವಾದ್ಯಗೋಷ್ಠಿ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ.

ಮಧ್ಯಾಹ್ನ ೧೨ ಗಂಟೆಗೆ ನಡೆಯಲಿರುವ ಸುಗ್ಗಿ ಹುಗ್ಗಿ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಜಿ.ಪಂ.ಸದಸ್ಯ ಹೆಚ್.ಆರ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಸವಿತಾ ಈರಪ್ಪ, ಸೋಮವಾರಪೇಟೆ ಬಿಇಒ ಹೆಚ್.ಕೆ. ಪಾಂಡು ಮುಂತಾದವರು ಭಾಗವಹಿಸುತ್ತಾರೆ.

ಸುಗ್ಗಿ ಹುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೀಲು ಕುದುರೆ, ಗೊಂಬೆಕುಣಿತ, ವಾದ್ಯಗೋಷ್ಠಿ, ಡೊಳ್ಳುಕುಣಿತ, ಕಂಸಾಳೆ ನೃತ್ಯ, ಪೂಜಾ ಕುಣಿತ, ವೀರಗಾಸೆ, ಗೊರವರ ಕುಣಿತ, ಪಠಕುಣಿತ, ಸ್ಯಾಕ್ಯೊಪೋನ್, ಕೊಡವ ವಾದ್ಯ, ಜಾನಪದ ಹಾಡು, ಬಾವಗೀತೆ, ಸುಗಮ ಸಂಗೀತ ಕೊಡವ ನೃತ್ಯ, ಜಾನಪದ ನೃತ್ಯ, ಕೋಲಾಟ, ನೃತ್ಯರೂಪಕ, ರಂಗಗೀತೆ, ಪುರವಂತಿಕೆ, ಹುಲಿವೇಶ, ಸುಗ್ಗಿ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ ಎಂದು ಪೂರ್ವಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಕಾರ್ಯಕ್ರಮ ರೂವಾರಿ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಜಿ.ಬಿ. ಸಿದ್ದಲಿಂಗಪ್ಪ, ಪ್ರಮುಖರಾದ ಜಿ.ಬಿ. ಮೋಹನ್, ಕೆ.ಎಂ. ತಮ್ಮಯ್ಯ, ಎಸ್.ವಿ. ಸಿದ್ದಲಿಂಗಪ್ಪ ಮುಂತಾದವರಿದ್ದರು.