ಸೋಮವಾರಪೇಟೆ, ಫೆ. ೫: ಜಿಲ್ಲೆಯಲ್ಲಿ ಖಾಸಗಿ ಕಾರು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವದರಿಂದ ಹಳದಿ ಫಲಕದ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸುವಂತೆ ಟ್ಯಾಕ್ಸಿ ಚಾಲಕರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು, ಬಿಳಿ ಬಣ್ಣದ ಬೋರ್ಡ್ ಹೊಂದಿರುವ ಹಲವಷ್ಟು ವಾಹನಗಳು ಬಾಡಿಗೆಯಲ್ಲಿ ತೊಡಗಿದ್ದು, ಇದರಿಂದಾಗಿ ವಾಣಿಜ್ಯ ಉದ್ದೇಶಕ್ಕಾಗಿ ಖರೀದಿ ಮಾಡಿರುವ ಹಳದಿ ಬೋರ್ಡ್ ವಾಹನಗಳ ಮಾಲೀಕರು ಬಾಡಿಗೆ ಇಲ್ಲದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.

ಹಳದಿ ಬೋರ್ಡ್ ವಾಹನಗಳಿಗೆ ಹೆಚ್ಚಿನ ತೆರಿಗೆ, ವಿಮೆ ಪಾವತಿ ಮಾಡುತ್ತಿದ್ದೇವೆ. ಆದರೆ ಬಿಳಿ ಬೋರ್ಡ್ನ ವಾಹನಗಳು ಬಾಡಿಗೆ ಮಾಡುತ್ತಿವೆ. ಈ ಬಗ್ಗೆ ಈಗಾಗಲೇ ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕ್ರಮ ವಹಿಸುವಂತೆ ಕೋರಲಾಗಿದೆ. ಆದರೂ ಯಾವದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಭಿಪ್ರಾಯಿಸಿದರು.

ಬಿಳಿ ಬಣ್ಣದ ಬೋರ್ಡ್ ಹೊಂದಿರುವ ಮಾಲೀಕರು ತಮ್ಮ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಳದಿ ಬಣ್ಣದ ಬೋರ್ಡ್ಗೆ ನೋಂದಣಿ ಮಾಡಿಕೊಂಡು ಬಾಡಿಗೆ ಮಾಡುವಂತಾಗಲಿ. ತಪ್ಪಿದ್ದಲ್ಲಿ ಅಂತಹ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಘದಿAದ ಎಲ್ಲಾ ಪೊಲೀಸ್ ಠಾಣೆಗಳಿಗೂ ಪತ್ರ ಬರೆಯಬೇಕೆಂದು ಸಭೆಯಲ್ಲಿದ್ದ ಸದಸ್ಯರು ಅಭಿಪ್ರಾಯಿಸಿದರು.

ಈ ಬಗ್ಗೆ ಮತ್ತೊಮ್ಮೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸಂಘದಿAದ ಮನವಿ ಸಲ್ಲಿಸಲಾಗುವದು ಎಂದು ಅಧ್ಯಕ್ಷರು ತಿಳಿಸಿದರು.

ಸಂಘದ ಸದಸ್ಯರಿಗೆ ಗುಂಪು ವಿಮೆ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಸಂಘವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಮಾಡಬೇಕಿದೆ. ಸಂಘದ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖ ವಾಗಿದೆ ಎಂದು ವಿನ್ಸೆಂಟ್‌ಬಾಬು ಹೇಳಿದರು. ಇದರೊಂದಿಗೆ ಸಂಘಕ್ಕೆ ಜಿಲ್ಲಾ ಮಟ್ಟದಲ್ಲಿ ವಕೀಲರನ್ನು ನೇಮಿಸಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾ ಕಾರ್ಯಕಾರಿ ಸಮಿತಿಗೆ ಯಡೂರು ಗ್ರಾಮದ ಕೆ.ಆರ್. ಮಂಜುನಾಥ್ ಅವರನ್ನು ನೇಮಿಸಲಾಯಿತು.

ಸಭೆಯಲ್ಲಿ ಸಂಘದ ಜಿಲ್ಲಾ ರಕ್ಷಾಧಿಕಾರಿ ರಫೀಕ್, ಪ್ರಧಾನ ಕಾರ್ಯದರ್ಶಿ ರಖೀಬ್, ಸಹ ಕಾರ್ಯದರ್ಶಿ ಹೆಚ್.ಎನ್. ಕಿರಣ್, ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಸಾರ್ ಅಹಮ್ಮದ್, ಸದಸ್ಯ ರವಿ ಸೇರಿದಂತೆ ಸೋಮವಾರಪೇಟೆ, ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ವೀರಾಜಪೇಟೆ ವ್ಯಾಪ್ತಿಯ ಸದಸ್ಯರು ಉಪಸ್ಥಿತರಿದ್ದರು.