ಗೋಣಿಕೊಪ್ಪಲು, ಜ. ೨೮: ಪ್ರಧಾನಮಂತ್ರಿ ಜಲ್ಜೀವನ್ ಮಿಶನ್ ಯೋಜನೆಯಲ್ಲಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ರಸ್ತೆ ಕಾಮಗಾರಿ ಹಾಗೂ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ನಬಾರ್ಡ್ ಯೋಜನೆಯಿಂದ ಮಂಜೂರಾದ ಗೋದಾಮುಗಳು, ಕೃಷಿ ಕಣಗಳು ತೆರೆದ ಹರಾಜು ಕಟ್ಟೆಗೆ ನಿರ್ಮಾಣ, ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಪಾಲ್ಗೊಂಡು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಚಿಮಂಡ ಸುವಿನ್ ಗಣಪತಿ ತಿಳಿಸಿದ್ದಾರೆ. ತಾ. ೩೦ ರಂದು ದಿನಪೂರ್ತಿ ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸಂಸದರು ಪಾಲ್ಗೊಳ್ಳಲಿದ್ದು, ವೀರಾಜಪೇಟೆ- ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಜಲ್ಜೀವನ್ ಮಿಶನ್ ಯೋಜನೆಯಲ್ಲಿ ೧೧,೪೬೧ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಕ್ಕಾಗಿ ವೀರಾಜಪೇಟೆ ತಾಲೂಕಿನಲ್ಲಿ ಆರಂಭಿಕವಾಗಿ ರೂ. ೨೫.೮೨ ಕೋಟಿ, ಗ್ರಾಮ್ ಸಡಕ್ ಯೋಜನೆಯ ರಸ್ತೆ ಕಾಮಗಾರಿಗಾಗಿ ರೂ. ೨೬,೫೪ ಕೋಟಿ, ಕೃಷಿ ಉತ್ಪನ್ನ ಮಾರುಕಟ್ಟೆಗೆ ನಬಾರ್ಡ್ ಯೋಜನೆಯಿಂದ ಮಂಜೂರಾದ ರೂ. ೩.೪ ಕೋಟಿ ವೆಚ್ಚದ ಕಾಮಗಾರಿಗಳನ್ನು ತಾ. ೩೦ ರಂದು ತಾಲೂಕಿನ ವಿವಿಧ ಭಾಗದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ರಸ್ತೆ ಕಾಮಗಾರಿಯನ್ನು ರೂ. ೬.೧೫ ಕೋಟಿ ವೆಚ್ಚದಲ್ಲಿ ಹೆಮ್ಮಾಡುವಿನ ೬.೭೩ ಕಿ.ಮೀ. ಬೆಳ್ಳಪ್ಪನ ಕೆರೆ ೭.೭ ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂ. ೭.೯೮ ಕೋಟಿ, ಬೆಳ್ಳೂರಿನ ೫.೯೧ ಕಿ.ಮೀ. ರಸ್ತೆಗೆ ರೂ. ೫.೪೧ ಕೋಟಿ, ನಾಂಗಾಲ, ವಿ. ಬಾಡಗ ೮.೯೦ ಕಿ.ಮೀ.ಗೆ ರೂ. ೭ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ರೂ. ೨೬.೫೪ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಸಂಸದರು ಹಾಗೂ ಶಾಸಕರು ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಕಾಕೂರು, ಹೆರ್ಮಾಡು, ಕೇಂಬುಕೊಲ್ಲಿ ರಸ್ತೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ನಂತರ ಕುಟ್ಟ, ನಾಲ್ಕೇರಿ ಗ್ರಾಮದಲ್ಲಿ ಜೆ.ಜೆ.ಎಂ. ಭೂಮಿಪೂಜೆ ನೆರವೇರಿಸಿ ಆರ್ಎಂಸಿಯ ಗೋದಾಮು ಉದ್ಘಾಟಿಸಲಿದ್ದಾರೆ. ೧೧ ಗಂಟೆಗೆ ಕಾನೂರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ೧೨ ಗಂಟೆಗೆ ಹುದಿಕೇರಿ, ೧ ಗಂಟೆಗೆ ಕಿರುಗೂರು, ೨ ಗಂಟೆಗೆ ಕುಂದ, ೩ ಗಂಟೆಗೆ ಗೋಣಿಕೊಪ್ಪ, ೪ ಗಂಟೆಗೆ ಬಿಟ್ಟಂಗಾಲ, ೫ ಗಂಟೆಗೆ ಆರ್ಜಿ ಹಾಗೂ ೬ ಗಂಟೆಗೆ ಕಾರ್ಮಾಡುವಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾವಾಡಿ ಗ್ರಾಮದಲ್ಲಿ ಆರ್ಎಂಸಿ ವತಿಯಿಂದ ತೆರೆದ ಹರಾಜು ಕಟ್ಟೆ, ಭಗವತಿ ದೇವಸ್ಥಾನದಲ್ಲಿ ಕೃಷಿ ಕಣ, ಸ್ಪೋರ್ಟ್ಸ್ ಕ್ಲಬ್, ಗೋದಾಮು ವಾಣಿಜ್ಯ ಸಂಕೀರ್ಣ ಕಟ್ಟಡ ಮಳಿಗೆ ಉದ್ಘಾಟನಾ ಕಾರ್ಯಕ್ರಮಗಳು ಸೇರಿದಂತೆ ಒಟ್ಟು ರೂ. ೫೫.೭೬ ಕೋಟಿಯ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ವಕ್ತಾರ ಸುವಿನ್ ಗಣಪತಿ ತಿಳಿಸಿದ್ದಾರೆ.