ಗೋಣಿಕೊಪ್ಪಲು, ಜ. ೨೭: ನಮ್ಮ ಸಾಧನೆಗಳು ನಮಗೆ ಸಮಾಜದಲ್ಲಿ ಗೌರವವನ್ನು ಮತ್ತು ಸನ್ಮಾನವನ್ನು ತಂದುಕೊಡುತ್ತದೆ ಎಂದು ವಿವೇಕಾನಂದ ಯೂತ್ ಮೂವ್ಮೆಂಟ್ನ ಸ್ಥಾಪಕ ಸದಸ್ಯ ಹಾಗೂ ಪ್ರಸ್ತುತ ಖಜಾಂಚಿಯಾದ ಡಾ. ಕೆ. ಚಂದ್ರಶೇಖರ್ ನುಡಿದರು. ಅವರು ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಕೊಡಗು ಶಾಖೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ನಡೆದ ವಿಶೇಷಚೇತನರಿಗಾಗಿ ಸಮಗ್ರ ಆರೈಕೆ, ಬೆಂಬಲ ಮತ್ತು ಚಿಕಿತ್ಸಾ ಯೋಜನೆಯಂತೆ ವಿಶೇಷಚೇತನರಿಗೆ ಸಲಕರಣೆಗಳ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಅವರು ನಾವು ಸಮಾಜದಿಂದ ಏನನ್ನಾದರೂ ಪಡೆದರೆ ಅದನ್ನು ಬೇರೆಯವರಿಗೂ ನೀಡಿದರೆ ಮಾತ್ರ ಅದು ಸದುಪಯೋಗ ವಾದಂತಾಗುತ್ತದೆ. ಆದ್ದರಿಂದ ಇಂದು ಪಡೆದ ಪಸ್ತುಗಳ ಮಾಹಿತಿಯನ್ನು ಇತರ ವಿಶೇಷಚೇತನರಿಗೆ ನೀಡುವ ಮೂಲಕ ಅವರಿಗೂ ಪ್ರಯೋಜನ ವಾಗುವಂತೆ ಮಾಡಿದರೆ ಅದೇ ಸಮಾಜಸೇವೆಯಾಗುತ್ತದೆ ಎಂದರು.
ಅತಿಥಿಗಳಲ್ಲಿ ಒಬ್ಬರಾದ ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಹೆಚ್.ಆರ್. ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಅವರು ನೀಡುತ್ತಿರುವ ಸಲಕರಣೆಗಳು ಉತ್ತಮ ಗುಣಮಟ್ಟದ್ದಾಗಿದ್ದು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದರು. ವಿಶೇಷಚೇತನರು ಪ್ರಯತ್ನಿಸಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇತ್ತೀಚೆಗೆ ಐಎಎಸ್ ಪದವಿ ಪಡೆದ ಕುರುಡಿ ಪ್ರಾಂಜಲ್ ಪಾಟೀಲ್ ಸಾಕ್ಷಿಯಾಗುತ್ತಾರೆ ಎಂದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ವಿಶೇಷಚೇತನರಿಗೆ ಯಾವುದಾದರೂ ಅಂಗ ಊನತೆ ಇದ್ದರೆ ಅದಕ್ಕೆ ಬದಲಾಗಿ ಬೇರೆನಾದರೂ ವಿಶೇಷ ಅರ್ಹತೆ ಇರುತ್ತದೆ. ಅದು ಏನು ಎಂದು ಗುರುತಿಸಿ ಅದನ್ನು ಪ್ರೋತ್ಸಾಹಿಸಿದರೆ ಅವರು ಆ ಕ್ಷೇತ್ರದಲ್ಲಿ ಅಗ್ರಮಾನ್ಯರಾಗುತ್ತಾರೆ. ಅದಕ್ಕೆ ಸಾಕ್ಷಿ ಪದ್ಮಶ್ರೀ ಪಡೆದ ಪರ್ವತಾರೋಹಿ ವಿಶೇಷಚೇತನೆ ಅರುಣಿಮಾ ಸಿನ್ಹ ಅವರು ಎಂದರು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ಮೂಕಳೇರ ಬೀಟಾ ಲಕ್ಷಣ್ ಮಾತನಾಡಿ, ರೋಟರಿ ಸಂಸ್ಥೆಯು ಪೋಲಿಯೋ ನಿವಾರಣಾ ಕಾರ್ಯಕ್ರಮವನ್ನು ಪ್ರತಿವರ್ಷ ತಪಸ್ಸಿನಂತೆ ಆಚರಿಸು ತ್ತಿದ್ದು ಅದರಿಂದ ಪೋಲಿಯೋ ಭಾದಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪೋಲಿಯೋ ದಿಂದ ಆಗುವ ಅಂಗವೈಕಲ್ಯ ಕಡಿಮೆಯಾಗಿದೆ ಎಂದರು.
ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ನಿಮ್ಮ ಊನತೆಯನ್ನೇ ಗ್ರಹಿಸದೆ ಕೆಲಸಮಾಡಿದರೆ ಏನನ್ನೂ ಸಾಧಿಸಲು ಸಾಧ್ಯವಿದೆ ಎಂದರು.
ಸAಸ್ಥೆಯ ಜಿಲ್ಲಾ ಅಧಿಕಾರಿ ಅಂಕಚಾರಿ, ತಾಲೂಕು ವಿಶೇಷಚೇತನ ಸಂಯೋಜಕ ಪ್ರಥಮ್, ರೋಟರಿ ಸಂಸ್ಥೆಯ ಕಿಶೋರ್ ಮಾದಪ್ಪ, ಇಮ್ಮಿ ಉತ್ತಪ್ಪ, ಚಂದನ್ ಕಾಮತ್ ಉಪಸ್ಥಿತರಿದ್ದರು.