ಶ್ರೀಮಂಗಲ, ಜ. ೨೭ : ಪರಿಸರ ಸ್ನೇಹಿಯಾದ, ಪರಿಸರಕ್ಕೆ ಅಪಾರ ಕೊಡುಗೆ ನೀಡಿರುವ ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿ ಪಶ್ಚಿಮ ಘಟ್ಟದ ಸಂರಕ್ಷಣೆ ಮಾಡುತ್ತಿರುವ ಕಾಫಿ ಉದ್ಯಮ ಸಂಕಷ್ಟದಲ್ಲಿದೆ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗವನ್ನು ಕಾಫಿ ಉದ್ಯಮ ಒದಗಿಸುತ್ತಿದೆ. ಈ ಉದ್ಯಮದ ರಕ್ಷಣೆಗೆ ಮತ್ತು ಬೆಳೆಗಾರರ ಉಳಿವಿಗೆ ಕೇರಳ ಸರಕಾರ ರೂಪಿಸಿರುವ ಯೋಜನೆ ಸ್ವಾಗತಾರ್ಹವಾಗಿದೆ. ಇದೇ ರೀತಿಯಲ್ಲಿ ರಾಜ್ಯದ ಕಾಫಿ ಬೆಳೆಗಾರರ ಚೇತರಿಕೆಗೆ ಸೂಕ್ತ ನೆರವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಘೋಷಿಸಬೇಕೆಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು ಬ್ರಿಟೀಷ್ ಆಡಳಿತವಿರುವಾಗಲೇ ೧೯೪೨ರಲ್ಲಿ ಕಾಫಿ ಕಾಯ್ದೆ ಬಂದಿದ್ದು, ಸ್ವಾತಂತ್ರö್ಯದ ನಂತರ ಕಾಫಿ ಮಂಡಳಿ ಸ್ಥಾಪನೆಯಾಗಿ ವಿಸ್ತರಣಾ ಘಟಕಗಳು ಆರಂಭವಾದವು. ಇವುಗಳು ಕಾಫಿ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದ್ದವು. ಈಗಾಗಲೇ ಕಾಫಿ ಮಂಡಳಿ ಬೆಳೆಗಾರರಿಗೆ ನೀಡುತ್ತಿರುವ ಬೆಳೆ ಪ್ರೋತ್ಸಾಹಕ್ಕೆ ನೀಡುತ್ತಿರುವ ಸಹಾಯ ಧನ ಸ್ಥಗಿತವಾಗಿದ್ದು, ಇದರಿಂದ ಸಣ್ಣ ಬೆಳೆಗಾರರಿಗೆ ದೊಡ್ಡ ನಷ್ಟವಾಗಿದೆ. ಕಾಫಿ ಮಂಡಳಿಯ ವಿವಿಧ ಶಾಖೆಗಳನ್ನು ಮುಚ್ಚುತ್ತಿರುವುದು ಸಹ ಬೆಳೆಗಾರರಿಗೆ ಅನಾನುಕೂಲವಾಗುತ್ತಿದೆ. ಇಂತಹ ಸಹಾಯಧನ ಮತ್ತು ಕಾಫಿ ಮಂಡಳಿಯ ಶಾಖೆಯನ್ನು ಮುಚ್ಚದೇ ಮುಂದುವರೆಸಬೇಕೆAದು ಅವರು ಒತ್ತಾಯಿಸಿದ್ದಾರೆ. ಸತತ ಹವಾಮಾನ ವೈಪರೀತ್ಯ, ವನ್ಯಪ್ರಾಣಿಗಳ ಹಾವಳಿ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕಾಫಿ ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಕೇರಳ ಸರಕಾರ ಘೋಷಿಸಿರುವಂತೆ ಜಿಲ್ಲೆಯಲ್ಲಿ ಕಾಫಿಗೆ ವೈಜ್ಞಾನಿಕ ಬೆಂಬಲ ಬೆಲೆಯೊಂದಿಗೆ ವಿಶೇಷ ಯೋಜನೆಯ ಮೂಲಕ ನೆರವು ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.