ಕಣಿವೆ, ಜ. ೨೮: ಕಾವೇರಿ ನದಿ ಪಾತ್ರದ ನೂರಾರು ಎಕರೆ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ವಾಣಿಜ್ಯ ಬೆಳೆ ಶುಂಠಿಯನ್ನು ಬೆಳೆಯುತ್ತಿರುವುದರಿಂದ ಬೆಳೆಗಾರರು ಸೇರಿ ಕಾಫಿ ಮತ್ತು ಏಲಕ್ಕಿ ಸಹಕಾರ ಸಂಘಗಳ ಮಾದರಿಯಲ್ಲಿ ಶುಂಠಿ ಬೆಳೆಗಾರರ ಸಹಕಾರ ಸಂಘವನ್ನು ರಚಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಆಗ್ರಹಿಸಿದ್ದಾರೆ.

‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಭೂಮಿಯು ಬಂಜೆ - ಕಿಸೆಯೂ ಬರಿದು’ ಎಂಬ ಶುಂಠಿ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಶುಂಠಿ ಬೆಳೆಗಾರರನ್ನು ಮಾರಾಟಗಾರರು ದರ ಹಾಗೂ ತೂಕದಲ್ಲಿ ವಂಚಿಸುತ್ತಾ ಬರುತ್ತಿದ್ದಾರೆ. ಆರೆಂಟು ತಿಂಗಳ ಅವಧಿಯ ಈ ಶುಂಠಿ ಫಸಲು ತೆಗೆಯಲು ಬೆಳೆಗಾರರು ಲಕ್ಷಾಂತರ ರೂಪಾಯಿ ಹಣ ವ್ಯಯಿಸುತ್ತಾರೆ. ಆದರೆ ಕೆಲವೇ ಕೆಲವು ಸಂಖ್ಯೆಯಲ್ಲಿರುವ ಮಾರಾಟಗಾರರು ಹಾಗೂ ಮಧ್ಯವರ್ತಿಗಳು ಸೇರಿಕೊಂಡು ಶುಂಠಿ ಮಾರುಕಟ್ಟೆಯ ದರವನ್ನು ಮುಚ್ಚಿಟ್ಟು ಕೃಷಿಕರಿಗೆ ವಂಚಿಸುತ್ತಿದ್ದಾರೆ. ಹೀಗಾಗಿ ಶುಂಠಿ ಖರೀದಿಸುವ ವ್ಯಾಪಾರಸ್ಥರು ಕೋಟ್ಯಾಧೀಶರಾಗುತ್ತಿದ್ದಾರೆ. ಬೆಳೆಗಾರರು ಸಾಲದ ಶೂಲಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ವಾಣಿಜ್ಯ ಬೆಳೆ ಕಾಫಿ ಹಾಗೂ ಮೆಣಸು ಬೆಳೆಗಾರರು ರಚಿಸಿಕೊಂಡಿರುವ ಮಾದರಿಯಲ್ಲಿ ಶುಂಠಿ ಬೆಳೆಗಾರರು ಕೂಡ ಸಹಕಾರ ಸಂಘವನ್ನು ರಚಿಸಿಕೊಂಡು ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳ ವಂಚನೆಯಿAದ ದೂರವಿರಬಹುದೆಂದು ಅಶೋಕ್ ಹೇಳಿದ್ದಾರೆ.

ಹಾಗೆಯೇ ಶುಂಠಿ ಬೆಳೆಯಲು ಭೂಮಿಗೆ ವಿಪರೀತವಾಗಿ ರಾಸಾಯನ ಸುರಿಯುವುದರ ಬದಲು ಪರ್ಯಾಯ ಸಾವಯವ ವಿಧಾನಗಳನ್ನು ಅನುಸರಿಸಬೇಕೆಂದು ಅವರು ಹೇಳಿದ್ದಾರೆ.