ಮಡಿಕೇರಿ, ಜ. ೨೮ : ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಕಳೆದ ಎರಡೂವರೆ ದಶಕಗಳ ಹಿಂದಿನ ಮಾರುಕಟ್ಟೆ ದರವನ್ನು ಈಗಲೂ ಪಡೆಯುತ್ತಿದ್ದಾರೆ. ಉತ್ಪಾದನಾ ವೆಚ್ಚ ಹಲವಾರು ಪಟ್ಟು ಹೆಚ್ಚಾಗಿರುತ್ತದೆ. ಕಳೆದ ಮೂರು ವರ್ಷಗಳಿಂದ ನಿರಂತರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವುದಲ್ಲದೆ, ಕೋವಿಡ್-೧೯ ಲಾಕ್‌ಡೌನ್ ಸಾಂಕ್ರಾಮಿಕ ರೋಗದ ದುಷ್ಪರಿಣಾಮ ಮತ್ತು ಕಾರ್ಮಿಕರ ಅಲಭ್ಯತೆಯಿಂದ ಸಾಕಷ್ಟು ನಷ್ಟ ಅನುಭವಿಸಿರುತ್ತಾರೆ. ಈ ಕಾರಣಗಳಿಂದಾಗಿ ಕಾಫಿ ಬೆಳೆಗಾರರಿಗೆ, ಸರ್ಕಾರ ಉತ್ತೇಜಿಸುವ ಹಾಗೂ ಧನ ಸಹಾಯ ನೀಡುವ ಅವಶ್ಯಕತೆ ಇದೆ. ಆದ್ದರಿಂದ ತೀವ್ರ ಸಂಕಷ್ಟ ಅನುಭವಿಸಿರುವ ಕೊಡಗು ಜಿಲ್ಲೆಯ ಬೆಳೆಗಾರರಿಗೆ ಅವರ ಬೇಡಿಕೆಗಳನ್ನು ಪರಿಗಣಿಸಿ, ಸದ್ಯದಲ್ಲೇ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.