ಸೋಮವಾರಪೇಟೆ, ಜ. ೨೭: ಅಕ್ರಮ-ಸಕ್ರಮ ಸಮಿತಿ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಿಂಗಳಿಗೆ ೩೦೦ರಂತೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತಿರುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಇಲ್ಲಿನ ಶಾಸಕರ ಕಚೇರಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಕಳೆದ ಅನೇಕ ದಶಕಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಮಂದಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಆದ್ಯತೆಯ ಮೇರೆ ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ. ತಿಂಗಳಿಗೆ ಕನಿಷ್ಟ ೩೦೦ ಮಂದಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಗ್ರಾಮಾAತರ ಪ್ರದೇಶದಿಂದ ೯೪ ಸಿ ಅಡಿಯಲ್ಲಿ ಸೋಮವಾರಪೇಟೆ ತಾಲೂಕಿನ ೨೦೨ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಹಿಸಲಾಗಿದೆ ಎಂದರು. ಇದರೊಂದಿಗೆ ೯೪ ಸಿ.ಸಿ. ಅಡಿಯಲ್ಲಿ ೧೪ ಮಂದಿಗೆ, ಫಾರಂ ೫೦ ಅಡಿಯಲ್ಲಿ ೧೨ ಮತ್ತು ೫೩ ಅಡಿಯಲ್ಲಿ ೬೩ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿಯಲ್ಲಿ ೩೧೪ ಮಂದಿಗೆ ಹಕ್ಕುಪತ್ರ ವಿತರಿಸಲಾಗುವದು. ಶಾಂತಳ್ಳಿ ಹೋಬಳಿಯಲ್ಲಿ ೧೧೦ ಮಂದಿಯ ಹಕ್ಕುಪತ್ರಗಳು ಸಿದ್ಧವಾಗಿದ್ದು, ಸದ್ಯದಲ್ಲಿಯೇ ವಿತರಿಸಲಾಗುವದು ಎಂದರು.

ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೨೯, ಸುಂಟಿಕೊಪ್ಪದಲ್ಲಿ ೩೬, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ೭, ಕುಶಾಲನಗರ ವ್ಯಾಪ್ತಿಯಲ್ಲಿ ೨, ಶನಿವಾರಸಂತೆ ವ್ಯಾಪ್ತಿಯಲ್ಲಿ ೨೦ ಫಲಾನುಭವಿಗಳಿಗೆ ಶಾಸಕರು ಹಕ್ಕು ಪತ್ರ ವಿತರಿಸಿದರು. ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಯಾವದೇ ಕಾರಣಕ್ಕೂ ಪರಭಾರೆ ಮಾಡಬಾರದು. ಅಂತಹ ಪ್ರಕರಣ ಕಂಡುಬAದರೆ ಕ್ರಮ ಕೈಗೊಳ್ಳಲಾಗುವದು ಎಂದು ಇದೇ ಸಂದರ್ಭ ಶಾಸಕ ರಂಜನ್ ಎಚ್ಚರಿಸಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.