ನಾಪೋಕ್ಲು, ಜ. ೨೭: ಕಳೆದ ಮೂರು ದಿನಗಳಿಂದ ನಾಪೋಕ್ಲುವಿನ ಡೆಕ್ಕನ್ ಯುವಕ ಸಂಘದ ವತಿಯಿಂದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಕಾರೇಕಾಡ್ ಷಂಶುದ್ದೀನ್ ಮಾಲೀಕತ್ವದ ಕೆ.ಕೆ.ಆರ್. ತಂಡವು ಫಾತೀಮ ಫ್ರೆಂಡ್ಸ್ ತಂಡವನ್ನು ಫೈನಲ್ ಪಂದ್ಯಾಟದಲ್ಲಿ ಮಣಿಸಿ ನಾಲ್ಕುನಾಡು ಪ್ರೀಮಿಯರ್ ಕಪ್ ಅನ್ನು ತನ್ನಾದಾಗಿಸಿಕೊಂಡು ಟ್ರೋಫಿ ಮತ್ತು ನಗದು ೨೫ ಸಾವಿರ ರೂ.ಗಳನ್ನು ಪಡೆದುಕೊಂಡಿತು. ಫಾತೀಮ ಫ್ರೆಂಡ್ಸ್ ತಂಡವು ರನ್ರ‍್ಸ್ ತಂಡವಾಗಿ ಹೊರಹೊಮ್ಮಿ ಆಕರ್ಷಕ ಟ್ರೋಫಿಯೊಂದಿಗೆ ರೂ. ೧೩ ಸಾವಿರವನ್ನು ಪಡೆದುಕೊಂಡಿತ್ತು. ತೃತೀಯ ಸ್ಥಾನವನ್ನು ಪ್ಯಾಂಥರ್ಸ್ ತಂಡ ಪಡೆದುಕೊಂಡಿತು.

ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಫಾತೀಮ ತಂಡದ ದಿನು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೆ.ಕೆ.ಆರ್. ತಂಡದ ಆಶಿಕ್, ಉತ್ತಮ ದಾಂಡಿಗ ಟ್ರೋಫಿಯನ್ನು ಫೈಟರ್ಸ್ ತಂಡದ ಖಾದರ್ (ಚಾಯಿ) ಪಡೆದುಕೊಂಡರು, ಪಂದ್ಯಾಟದ ಉತ್ತಮ ತಂಡವಾಗಿ ಗಲ್ಲಿ ಬಾಯ್ಸ್ ತಂಡ ಬಹುಮಾನ ಪಡೆಯಿತು. ಅತೀ ಹೆಚ್ಚ್ಚು ಸಿಕ್ಸರ್ ಫಾಂಥರ್ ತಂಡದ ಸಂದೇಶ್ ಮತ್ತು ಉತ್ತಮ ಆಯೋಜಕ ಪ್ರಶಸ್ತಿಯನ್ನು ಹುಬೈದುಲ್ಲ ಮತ್ತು ಕರಿಂ ಪಡೆದರು.

ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡೆಯನ್ನು ಆಯೋಜಿಸುವುದರಿಂದ ಯುವ ಪ್ರತಿಭೆಗಳು ಕ್ರೀಡೆಯಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಜೂರ್ ವಹಿಸಿದ್ದರು, ವೇದಿಕೆಯಲ್ಲಿ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ. ಇಸ್ಮಾಯಿಲ್. ಮಹಮ್ಮದ್ ಖುರೇಶಿ, ಜಮಾಅತ್ ಅಧ್ಯಕ್ಷ ಸಲೀಂ ಹ್ಯಾರೀಸ್, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೊಯಿದು ಮತ್ತಿತರರು ಇದ್ದರು.